ನ್ಯೂಸ್ ನಾಟೌಟ್ :ಕಳೆದ ವರ್ಷ ಕರ್ನಾಟಕದ ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಆರಂಭಗೊಂಡ ವಿದ್ಯಾರ್ಥಿನಿಯರ ಹಿಜಾಬ್ ವಿವಾದ ಇಡೀ ದೇಶವನ್ನೇ ಆವರಿಸಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಐಡಿಎಸ್ಜಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು (Students) ಬುರ್ಖಾ, ಹಿಜಾಬ್ (Hijab) ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಸಮವಸ್ತ್ರ ಮತ್ತು ಐ.ಡಿ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಇದೀಗ ಕಾಲೇಜ್ ಸಿಬ್ಬಂದಿ ಪ್ರತಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಕಾಲೇಜಿನ ಒಳಗಡೆ ಬಿಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕಾಲೇಜ್ ಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ, ಐ.ಡಿ ಕಾರ್ಡ್ ಭರಿಸಲೇ ಬೇಕು.ಇಲ್ಲವಾದಲ್ಲಿ ಅವರಿಗೆ ಕಾಲೇಜ್ ಗೆ ಬರಲು ಅವಕಾಶ ನಿಡೋದಿಲ್ಲ.ಒಂದು ವೇಳೆ ಐಡಿ ಹಾಗೂ ಸಮವಸ್ತ್ರ ಹಾಕದೇ ಕಾಲೇಜ್ಗೆ ಬಂದದ್ದೇ ಆದಲ್ಲಿ ಅವರನ್ನು ನೇರವಾಗಿ ಮನೆ ಕಡೆ ಕಳಿಸಲಾಗುತ್ತದೆ. ಮಾತ್ರವಲ್ಲ ಮುಂಜಾಗ್ರತಾ ಕ್ರಮವಾಗಿ ಕಾಲೇಜು ಬಳಿ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಗುರುವಾರ (ಆ.10)ದಂದು ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿಗೆ ಎಂದಿನಂತೆ ಬೆಳಗ್ಗೆ ವಿದ್ಯಾರ್ಥಿಗಳು ಆಗಮಿಸಿದ್ದರು.ಈ ವೇಳೆ ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು.ಚಿಕ್ಕಮಗಳೂರಿನಲ್ಲಿರುವ ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ವಿಡಿಯೋ ವೈರಲ್ ಆಗೋದಕ್ಕೆ ಆರಂಭವಾಯಿತು. ಇದು ಕಾಲೇಜ್ ಆಡಳಿತ ಮಂಡಳಿ ಗಮನಕ್ಕೂ ಬಂದಿತ್ತು.
ವೈರಲ್ ಆದ ವಿಡಿಯೋವನ್ನು ಪರಿಶೀಲಿಸಿದಾಗ ಅದರಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಯಲ್ಲಿ ಪಾಠ ಕೇಳುತ್ತಿರುವುದು ಮತ್ತು ಕಾಲೇಜು ಕಾರಿಡಾರ್ನಲ್ಲಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿತ್ತು.ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಲವು ಮಂದಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು ಎಂದು ತಿಳಿದು ಬಂದಿದೆ.
ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ್ದು ವಿವಾದಕ್ಕೆ ಗುರಿಯಾಗಿತ್ತು.ಸಣ್ಣ ನಗರದಲ್ಲಿ ಆರಂಭವಾದ ಹಿಜಾಬ್ ಗಲಾಟೆ ದೇಶವನ್ನೇ ವ್ಯಾಪಿಸಿತು. ರಾಜಕೀಯದವರಿಗೂ ಈ ಘಟನೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.ಮತ್ತೊಂದು ಕಡೆ ಹಿಂದೂ ವಿದ್ಯಾರ್ಥಿಗಳು ಕೇಸರಿನ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.ಹೀಗೆ ವಿವಾದದ ಕಿಡಿ ಉರಿದುಹೋದ ನಂತರ ನಂದಿಸುವುದು ಹೇಗೆ ಎನ್ನುವ ಪ್ರಶ್ನೆ ಕಾಡತೊಡಗಿತ್ತು. ಆನಂತರ ಇದು ಕೋರ್ಟ್ ಮೆಟ್ಟಿಲೇರಿತು.
ಈ ಎಲ್ಲ ಬೆಳವಣಿಗೆಗಳಾದ ನಂತರ ರಾಜ್ಯ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿತ್ತು. ಅದೇನೆಂದ್ರೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು.ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು ಹಾಗೂ ಖಾಸಗಿ ಶಾಲೆಗಳಲ್ಲಿಯೂ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕು ಎಂದು ಆದೇಶ ಹೊರಡಿಸಿತ್ತು.