ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ಸರಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಬಂದ ಮಹಿಳೆಯೊಬ್ಬರ ಮೇಲೆ ಮೇಲ್ಚಾವಣಿ ಕುಸಿದು ಬಿದ್ದಿದ್ದ ಘಟನೆ ನಡೆದಿತ್ತು. ಇದೀಗ ಇಂತಹುದೇ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿಯೊಂದರ ಛಾವಣಿಯೇ ಕುಸಿದು ಬಿದ್ದಿದ್ದು ಪರಿಣಾಮವಾಗಿ 10 ತಿಂಗಳ ಮಗುವಿನ ತಲೆಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಇಷ್ಟಾಗಿಯೂ ಕೂಡ ಮಗುವಿನ ಮುಖದಲ್ಲಿ ನಗುವಿನ ಛಾಯೆ ಮಾಸಲಿಲ್ಲ.ಇದು ತುಂಬಾ ಆಶ್ಚರ್ಯಕರ ವಿಚಾರವಾಗಿದೆ.ಸಾಮಾನ್ಯವಾಗಿ ಮಕ್ಕಳು ಸಣ್ಣ ಶಬ್ಧವಾದರೂ ಕೂಡ ಮಕ್ಕಳು ಅಂಜುತ್ತಾರೆ.ಆದರೆ ಈ ಮಗುವಿನ ಧೈರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕಲಾಗಿತ್ತು. ಈ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಂದರ್ಭ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೆ ಬಿದ್ದಿದೆ.ಸಣ್ಣ ವಸ್ತು ಬಿದ್ದರೂ ತಡೆದುಕೊಳ್ಳಲಾಗದಂತಹ ನೋವು ಆಗುವ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದು ಬಿದ್ರೆ ಹೇಗಾಗಬೇಡ. 10 ತಿಂಗಳ ಮಗು ಕೀರ್ತಿ ತಲೆಗೆ ಗಾಯ ಉಂಟಾಗಿದ್ದು, ಬದುಕಿ ಬಂದಿದ್ದೇ ಪವಾಡ..!
ಆದರೆ ಈ ಮಗುಗೆ ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್ ಹಾಕಿದ ಮೇಲೆ ಮಗು ನಗುತ್ತಿರುವುದು ನೋಡುಗರ ಹೃದಯಸ್ಪರ್ಶಿಸುತ್ತಿದೆ. ಮಕ್ಕಳ ಮುಗ್ಧತೆ ಹೀಗಿರುವಾಗ ಅಂಗನವಾಡಿಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿರುವುದು ನಿಜಕ್ಕೂ ದುರದೃಷ್ಟಕರ.ಈ ಕಳಪೆ ಕಾಮಗಾರಿಗೆ ಯಾರದ್ದೋ ಮಕ್ಕಳು ಬಲಿಪಶುಗಳಾಗ್ತ ಇದ್ದಾರೆ ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿಯಾಗಿದೆ.
ಏನೋ ಅದೃಷ್ಟ ಚೆನ್ನಾಗಿರೋದಕ್ಕೆ ಅಂಗನವಾಡಿಯಲ್ಲೇ ಇದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅದೃಷ್ಟ ಕೈ ಕೊಡುತ್ತಿದ್ದರೆ ಏನಾಗುತ್ತಿತ್ತು ನೀವೇ ಊಹಿಸಿಕೊಳ್ಳಿ..ಇಂತಹ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಿದ್ದು ಕೂಡಲೇ ಸರಕಾರ ಹಾಗೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.
ಗಾಯಾಳು ಮಗು ಕೀರ್ತಿಯನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಆದರೆ ಈ ಘಟನೆಗೆ ಕಾರಣವೇನು ಅನ್ನೋದರ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.