ನ್ಯೂಸ್ ನಾಟೌಟ್ :ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕ ವಿಧಿವಶರಾಗಿದ್ದಾರೆ.ವಸಂತ ಕುರುಂಜಿಗುಡ್ಡೆ(೩೯) ಮೃತರು ಎಂದು ತಿಳಿದು ಬಂದಿದೆ. ಇವರು ಸುಳ್ಯ ಕುರುಂಜಿಗುಡ್ಡೆ ಕೃಷ್ಣಪ್ಪ ಪೂಜಾರಿಯವರ ಪುತ್ರ.
ಕಳೆದ ಎರಡು ದಿನಗಳ ಹಿಂದೆ ದಿಢೀರ್ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಿದೆ.ಕೂಡಲೇ ಅವರನ್ನು ಸಮೀಪದ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು,ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಮೃತರು ಬ್ರೈನ್ ಹ್ಯಾಮರೇಜ್ ನಿಂದಾಗಿ ಬಳಲಿದ್ದರು ಹೀಗಾಗಿ ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ನಿನ್ನೆ ರಾತ್ರಿ ವೇಳೆ ಮತ್ತೆ ಕಾಯಿಲೆ ಉಲ್ಬಣಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ವೇಳೆಗೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಬಾಲ್ಯದಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಕ್ರೀಡಾ ಪ್ರತಿಭೆಯಾಗಿಯೂ ಗುರುತಿಸಿಕೊಂಡಿದ್ದರು.ಮಾತ್ರವಲ್ಲ ಪ್ರಮುಖ ಕ್ರೀಡಾಪಟುವಾಗಿಯೂ ಮಿಂಚಿದ್ದರು.ವಲಯ ಸೇರಿದಂತೆ ತಾಲೂಕಿನ ಕೆಲ ತಂಡಗಳಲ್ಲಿ ಗುರುತಿಸಿಕೊಂಡು ಕೀರ್ತಿಗೆ ಪಾತ್ರರಾಗಿದ್ದರು.ಇದೀಗ ಇವರ ಅಗಲಿಕೆ ಕುಟುಂಬ ಹಾಗೂ ಸ್ನೇಹಿತ ಬಳಗದವರಲ್ಲಿ ನೋವನ್ನುಂಟು ಮಾಡಿದೆ.
ಮೃತ ವಸಂತ್ ಅವರು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.11.30 ರ ವೇಳೆಗೆ ಸುಳ್ಯಕ್ಕೆ ಮೃತದೇಹ ತಲುಪಿದ ಬಳಿಕ ಕೆ ವಿ ಜಿ ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಳಿಕ ಕುರುಂಜಿಗುಡ್ಡೆ ಮನೆಗೆ ಮೃತದೇಹ ಕೊಂಡು ಹೋಗಲಾಗುತ್ತದೆ ಎಂದು ತಿಳಿದುಬಂದಿದೆ.