ನ್ಯೂಸ್ ನಾಟೌಟ್: ರಾಜ್ಯಾದ್ಯಂತ, ದೇಶಾದ್ಯಂತ ಭಾರಿ ಸದ್ದು ಮಾಡಿರುವ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಸುಳ್ಯದಲ್ಲಿ ನಡೆದ ಜಾಥ ಬಳಿಕ ಇದೀಗ ಪುತ್ತೂರಿನಲ್ಲಿಯೂ ದೊಡ್ಡ ಮಟ್ಟದಲ್ಲಿ ಜಾಥಾ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ಬೆಳ್ತಂಗಡಿ ಚಲೋ ಮಹಾಧರಣಿ ಹಮ್ಮಿಕೊಳ್ಳಲಾಗಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.
ಈ ಬಗ್ಗೆ ಸ್ವತಃ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ರಾಜ್ಯ ಸರಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಬೇಕು. ಉಜಿರೆ,ಧರ್ಮಸ್ಥಳ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗಸ್ಟ್ 28 ರಂದು ರಾಜ್ಯಮಟ್ಟದ ಚಲೋ ಬೆಳ್ತಂಗಡಿ ಮಹಾಧರರಣಿ ನಡೆಯಲಿದೆ ಎಂದು ಹೇಳಿದರು.
ಗುರುವಾರ ಆಗಸ್ಟ್ 10 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಪತ್ರಿಗೋಷ್ಠಿಯಲ್ಲಿ ಬಂಗೇರ ಮಾತಾನಾಡಿದರು. ಸೌಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿ ದೊಡ್ಡ ರೀತಿಯ ಪ್ರತಿಭಟನೆಗಳು ನಡೆದಿತ್ತು. ಜನಾಗ್ರಹ ಪರಿಗಣಿಸಿ ಅಂದಿನ ಸಿದ್ದರಾಮಯ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ನ್ಯಾಯಲಯದ ತೀರ್ಪಿನ ನಂತರ ಜನತೆ ಸಿಬಿಐ ಮೇಲಿನ ನಂಬಿಕೆ ಕಳೆದುಕೊಂಡಿದ್ದು ಮತ್ತೆ ರಾಜ್ಯದ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ತನಿಖೆ ನಡೆಸಲಿ ಎಂದು ಬಂಗೇರ ಆಗ್ರಹಿಸಿದರು.
ಮುಗ್ಧ ಬಡ ಹೆಣ್ಣು ಮಗಳು ಸೌಜನ್ಯಳಿಗೆ ನ್ಯಾಯ ಸಿಗಬೇಕು. ಸೌಜನ್ಯ ಪ್ರಕರಣದಲ್ಲಿ ಯಾರೂ ಯಾವತ್ತು ರಾಜಕೀಯ ಮಾಡಬಾರದು. ಬೆಳ್ತಂಗಡಿ ಚಲೋ ಮಹಾಧರಣಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಹಾಗೂ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಬಂಗೇರ ತಿಳಿಸಿದರು.
ಈ ಸಂದರ್ಭ ಚಲೋ ಬೆಳ್ತಂಗಡಿ ಮಹಾ ಧರಣಿಯ ಪೋಸ್ಟರನ್ನು ಬಿಡುಗಡೆ ಗೊಳಿಸಲಾಯಿತು. ಪತ್ರಿಗೋಷ್ಠಿಯಲ್ಲಿ ಕಾರ್ಮಿಕ ನಾಯಕರಾದ ಬಿ.ಎಮ್ ಭಟ್,ಡಿ.ವೈ.ಎಫ್.ಐ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ವಸಂತ ಬಿ.ಕೆ. ರಮೇಶ್ ಆರ್, ಸಿಪಿಎಮ್ ಜಿಲ್ಲಾ ಕಾರ್ಯದರ್ಶಿ ಯಾಧವ ಶೆಟ್ಟಿ, ಪ್ರಮುಖರಾದ ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.
ಪ್ರತಿಭಟನೆ ತಿರುವು ಹೇಗೆ..?
ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಇಡೀ ರಾಜ್ಯದಿಂದ ಬೆಳ್ತಂಗಡಿಗೆ ಜನ ಬರಲಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಈ ಪ್ರತಿಭಟನೆ ತಿರುವು ನೀಡುವ ಸಾಧ್ಯತೆ ಇದೆ ಎಂದೇ ಜನ ಹೇಳುತ್ತಿದ್ದಾರೆ.