ನ್ಯೂಸ್ ನಾಟೌಟ್: ಒಲಿಂಪಿಕ್ಸ್ ವಿಜೇತ ಕುಸ್ತಿಪಟುಗಳಿಂದ ಲೈಂಗಿಕ ಕಿರು* ಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ನ್ಯಾಯಾಲಯದಲ್ಲಿ ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಯಾವುದೇ ರೀತಿಯ ಲೈಂ* ಗಿಕ ಉದ್ದೇಶವಿಲ್ಲದೇ ಮಹಿಳೆಯನ್ನ ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ (Delhi Court) ಬಿಜೆಪಿ ಸಂಸದನ ಪರ ಹಾಜರಾದ ವಕೀಲ ರಾಜೀವ್ ಮೋಹನ್, ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪಗಳು ಕಾಲಮಿತಿಯನ್ನು ಮೀರಿ ಹೋಗಿವೆ. ಕುಸ್ತಿಪಟುಗಳು 5 ವರ್ಷಗಳವರೆಗೂ ಈ ಬಗ್ಗೆ ದೂರು ಸಲ್ಲಿಸಿರಲಿಲ್ಲ.
ಏಕೆಂದರೆ ತಮಗೆ ತಮ್ಮ ವೃತ್ತಿ ಜೀವನದ ಬಗ್ಗೆ ಚಿಂತೆ ಇತ್ತು ಅಂತಾ ಹೇಳಿದ್ದಾರೆ. ಆದ್ರೆ ಇದು ಸೂಕ್ತ ವಿವರಣೆ ಅಲ್ಲ. ಅವರ ನಿರೀಕ್ಷಿತ ಯೋಜನೆಗಳು ಈಗ ಬಯಲಾಗುತ್ತಿವೆ ಎಂದು ಭೂಷಣ್ ಪರ ವಕೀಲರು ತಿಳಿಸಿದ್ದಾರೆ ಎನ್ನಲಾಗಿದೆ.
ಕುಸ್ತಿ ಸ್ಪರ್ಧೆಯಂತಹ ಕಾರ್ಯಕ್ರಮಗಳ ವೇಳೆ ಪುರುಷ ಕೋಚ್ಗಳು ಮಹಿಳಾ ಕುಸ್ತಿಪಟುಗಳನ್ನ ಅಪ್ಪಿಕೊಳ್ಳುವುದು ತೀರಾ ಸಾಮಾನ್ಯ. ಬಹುತೇಕ ಕೋಚ್ಗಳು ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್ಗಳು ಇರುವುದು ತೀರಾ ವಿರಳ. ಮಹಿಳಾ ಆಟಗಾರ್ತಿಯರಿಗೆ ಮಹಿಳಾ ಕೋಚ್ಗಳೇ ಇರಬೇಕು ಎಂಬ ನಿರ್ಬಂಧ ಕೂಡ ಇಲ್ಲ. ಉತ್ತಮ ಸಾಧನೆಗಾಗಿ ಆಟಗಾರ್ತಿಯನ್ನ ಪುರುಷ ಕೋಚ್ ಅಪ್ಪಿಕೊಂಡರೆ ಅದು ಸಹಜ ಎಂದು ವಾದಿಸಿದ್ದಾರೆ. ಬ್ರಿಜ್ ಭೂಷಣ್ ಅವರು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಆರೋಪಗಳನ್ನ ತಳ್ಳಿಹಾಕಿದ ವಕೀಲರು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಏಪ್ರಿಲ್ 21 ರಂದೇ ಬ್ರಿಜ್ ಭೂಷಣ್ ವಿರುದ್ಧ ದೂರು ದಾಖಲಾಗಿದ್ದು, ಏಪ್ರಿಲ್ 28 ರಂದು ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. IPC ಸೆಕ್ಷನ್ 354, 354 (ಎ), 354 (ಡಿ) ಹಾಗೂ ಸೆಕ್ಷನ್ 34ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಭೂಷಣ್ ತಮ್ಮ ಮೊಣಕಾಲುಗಳು, ಅಂಗೈ ಮೇಲೆ ಮುಟ್ಟುತ್ತಿದ್ದ, ಉಸಿರಾಟ ಅರ್ಥಮಾಡಿಕೊಳ್ಳುವ ನೆಪದಲ್ಲಿ ಎದೆ ಮತ್ತು ಹೊಟ್ಟೆಯ ಮೇಲೂ ಸ್ಪರ್ಶಿಸುತ್ತಿದ್ದ. ತಮ್ಮ ಟೀ ಶರ್ಟ್ ಎಳೆದು ಎದೆ ಮೇಲೆ ಕೈ ಹಾಕಿದ್ದ, ತಮ್ಮನ್ನು ತಬ್ಬಿಕೊಳ್ಳುತ್ತಿದ್ದ ಎಂದು ಮಹಿಳಾ ಕುಸ್ತಿಪಟುಗಳು ದೂರಿನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.