ನ್ಯೂಸ್ ನಾಟೌಟ್ : ದೆಹಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ್ಬೊಮ್ಮಾಯಿ(Basavaraj Bommai) ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕನ ನೇಮಕ ವಿಚಾರವಾಗಿ ಅಮಿತ್ ಶಾ ಬಳಿ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಮೇ 13ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 135 ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡಿದೆ. ಅದಾಗಿ ಸುಮಾರು ಮೂರೂವರೆ ತಿಂಗಳಾದರೂ ಬಿಜೆಪಿಯು ಪ್ರತಿಪಕ್ಷ ನಾಯಕನ ನೇಮಕ ಮಾಡಿಲ್ಲ. ವಿಪಕ್ಷ ನಾಯಕನಿಲ್ಲದೇ ಬಜೆಟ್ ಅಧಿವೇಶನವೂ ನಡೆದಿದ್ದು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿತ್ತು.
ಬಿಜೆಪಿಯಿಂದ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ ಎನ್ನಲಾಗಿದೆ. ಪ್ರತಿಪಕ್ಷದ ನಾಯಕನ ಸ್ಥಾನ ನನಗೆ ಕೊಡಿ ಎಂದು ಕೇಳುವುದಕ್ಕಾಗಿ ಬಂದಿಲ್ಲ. ಆದರೆ, ಶೀಘ್ರದಲ್ಲೇ ಪ್ರತಿಪಕ್ಷ ನಾಯಕನನ್ನು ನೇಮಕ ಮಾಡದಿದ್ದರೆ ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ ಎಂದು ಅಮಿತ್ ಶಾ ಬಳಿ ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಪಕ್ಷದ ಬಗ್ಗೆಯೂ ತಪ್ಪು ಸಂದೇಶ ಹೋಗುತ್ತದೆ. ಯಾರನ್ನಾದರೂ ವಿರೋಧ ಪಕ್ಷದ ನಾಯಕನ್ನಾಗಿ ಮಾಡಿ. ಅವರ ನೇತೃತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾಯಕರು ಅಂತ ಯಾರಾದರೂ ಇದ್ದರೆ ಉಳಿದವರಿಗೂ ಹುರುಪು ಬರುತ್ತದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಯಾರನ್ನೂ ಹೆಸರಿಸದಿರುವುದು ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ.
ಭೇಟಿ ವೇಳೆ ಅಮಿತ್ ಶಾ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಬೊಮ್ಮಾಯಿ ಅವರಿಂದ ಮಾಹಿತಿ ಪಡೆದರು. ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ, ಆರ್ಥಿಕ ವ್ಯವಸ್ಥೆ ಹೇಗಿದೆ, ಲೋಪಗಳು ಮತ್ತಿತರ ವಿಚಾರಗಳ ಕುರಿತು ಅಮಿತ್ ಶಾ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಪ್ರತಿಪಕ್ಷ ನಾಯಕನ ನೇಮಕ ಮನವಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಈಗ ಎಲ್ಲರೂ ಜತೆಯಾಗಿ ಕೆಲಸ ಮಾಡುತ್ತಿದ್ದೀರಿ. ಹೀಗೆಯೇ ಮಾಡಿಕೊಂಡು ಹೋಗಿ. ಶೀಘ್ರವಾಗಿ ಎಲ್ಲ ತಂಡವನ್ನೂ ರಚಿಸಿ ನೇಮಕದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.