ನ್ಯೂಸ್ ನಾಟೌಟ್ : ಹಲವು ಬಾರಿ ಅನೇಕ ಕಡೆಗಳಲ್ಲಿ ಆಸ್ಪತ್ರೆಯಿಂದ ಮೃತಪಟ್ಟಿರುವುದಾಗಿ ದೃಢಪಟ್ಟ ವ್ಯಕ್ತಿಗಳು ಶವಾಗಾರದಲ್ಲಿ ಮತ್ತು ಚಿತೆಯಲ್ಲಿ ಎದ್ದ ಘಟನೆಗಳು ನಡೆದಿದೆ. ಈಗ ಮತ್ತೆ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಮನೆಯವರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದ ನಂತರ ಬಿಜೆಪಿ ನಾಯಕರೊಬ್ಬರು ಎದ್ದು ಕುಳಿತ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಆಗ್ರಾದ ಆಸ್ಪತ್ರೆಯಲ್ಲಿ ಬಿಜೆಪಿ ನಾಯಕ ಮಹೇಶ್ ಬಘೇಲ್ (mahesh baghel) ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಹೀಗಾಗಿ ಅವರ ಮನೆಯವರು ಅಂತಿಮ ಸಂಸ್ಕಾರಕ್ಕಾಗಿ ಅವರ ದೇಹವನ್ನು ಮನೆ ಬಳಿ ತಂದಿದ್ದರು. ಆದರೆ ಅಲ್ಲಿ ಅವರ ದೇಹದಲ್ಲಿ ಚಟುವಟಿಕೆಯನ್ನು ಗಮನಿಸಿದ ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಮರು ದಾಖಲಿಸಿದ್ದಾರೆ.
ನಿನ್ನೆ ಮನೆಯಲ್ಲೇ ಇದ್ದಾಗ ಮಹೇಶ್ ಬಘೇಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಮನೆಯವರು ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಮನೆಯವರು ಅವರನ್ನು ಮನೆಗೆ ಕರೆತಂದಿದ್ದರು. ಆದರೆ ಮನೆ ತಲುಪುತ್ತಿದ್ದಂತೆ ಅವರ ಕೈಕಾಲುಗಳು ಮಿಸುಕಾಡಲು ಶುರುವಾಗಿವೆ. ಹೀಗಾಗಿ ದೇಹದಲ್ಲಿ ಚಟುವಟಿಕೆಯನ್ನು ಗಮನಿಸಿದ ಅವರ ಕುಟುಂಬದವರು ಕೂಡಲೇ ಅವರನ್ನು ಮತ್ತೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಅವರು ಜೀವಂತವಿರುವುದಾಗಿ ಅವರನ್ನು ತಪಾಸಣೆ ಮಾಡಿದ ವೈದ್ಯರು ಹೇಳಿದ್ದಾರೆ.
ಮಹೇಶ್ ಅವರ ಕುಟುಂಬದವರ ಪ್ರಕಾರ, ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯ (Pushpanjali hospital) ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಮಹೇಶ್ ಅವರನ್ನು ಸರಾಯ್ ಖ್ವಾಜಾದ ಬಳಿ ಇರುವ ಅವರ ಮನೆಗೆ ಕರೆದುಕೊಂಡು ಬಂದಿದ್ದೆವು, ಸಂಬಂಧಿಗಳೆಲ್ಲರಿಗೂ ವಿಚಾರ ತಿಳಿಸಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು, ಅವರನ್ನು ಮಲಗಿಸಿದ್ದಲ್ಲಿಯೇ ಕುಟುಂಬದವರೆಲ್ಲರೂ ಕುಳಿತು ಅಳುತ್ತಿದ್ದರು. ಈ ವೇಳೆ ಅವರ ಕೈಕಾಲುಗಳು ಅಲುಗುವುದನ್ನು ಅಲ್ಲಿದ್ದವರು ಗಮನಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಈಗ ಅವರು ಆಗ್ರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.