ನ್ಯೂಸ್ ನಾಟೌಟ್: ಅತ್ಯಾಚಾರ ಹಾಗೂ ಕೊಲೆಗೀಡಾಗಿದ್ದ ಸೌಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ.ಈ ಕುರಿತಂತೆ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರು ಮಾತನಾಡುತ್ತಾ, ಕಾಲೇಜ್ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳ ಹತ್ಯೆಯಾಗಿ 11 ವರ್ಷ ಕಳೆದರೂ ಇನ್ನೂ ಆಕೆಗೆ ನ್ಯಾಯ ಸಿಕ್ಕಿಲ್ಲ.ಈ ಪ್ರಕರಣದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಹೊರಬಂದ ಮೇಲೆ ನಿಜವಾದ ಆರೋಪಿಗಳು ಯಾರು ಎನ್ನುವ ಕೂಗು ಕೇಳಿ ಬಂದಿದೆ. ಇಷ್ಟು ವರ್ಷವಾದರೂ ನೈಜ ಆರೋಪಿಯನ್ನು ಬಂಧಿಸದೇ ಇರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ನಮ್ಮ ಸಂಘ ಆಗ್ರಹಿಸುವುದೇನೆಂದರೆ ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೂಡಲೇ ಆ ಕೆಲಸವಾಗಬೇಕು. ಎಸ್ಐಟಿ ತನಿಖೆ ಮೂಲಕ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿ ಪಡಿಸಬೇಕು. ಆ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಮಾಯಕ ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿ ಹತ್ಯೆಗೈದಿರುವುದು ಪೈಶಾಚಿಕ ಕೃತ್ಯ.ಈ ರೀತಿಯ ಘಟನೆಗಳನ್ನು ಯಾವ ಸಮಾಜವೂ ಸಹಿಸಲು ಸಾಧ್ಯವಿಲ್ಲ ಎಂದರು.ಸೌಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷವಾಗಿ ಪರಿಗಣಿಸಿ ತುರ್ತು ತನಿಖೆಗೆ ಆದೇಶ ಹೊರಡಿಸಬೇಕು, ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ನೀಡಬೇಕೆಂದು ಚಂಗಪ್ಪ ಅವರು ಒತ್ತಾಯಿಸಿದ್ದಾರೆ.
ನೈಜ ಆರೋಪಿಗಳನ್ನು ಪತ್ತೆ ಮಾಡದೇ ಇರೋದಕ್ಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ.ಮುಂದೆ ಈ ರೀತಿಯ ಘಟನೆಗಳು ಸಮಾಜದಲ್ಲಿ ನಡೆಯ ಕೂಡದು. ಈ ಬಗ್ಗೆ ಎಚ್ಚರಿಕೆ ವಹಿಸಿ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಶಿಕ್ಷಗೊಳಪಡಿಸಬೇಕು ಎಂದು ಒತ್ತಾಯ ಮಾಡಿದರು.