ನ್ಯೂಸ್ ನಾಟೌಟ್ : ಸೌಜನ್ಯ ಕೇಸ್ ಗೆ ಸಂಬಂಧ ಪಟ್ಟ ಹಾಗೆ ಸುಳ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಗಳು ಕೇಳಿ ಬರುತ್ತಿವೆ.ಇದೀಗ ನಿಂತಿಕಲ್ಲಿನಿಂದ ಆರಂಭಗೊಂಡ ವಾಹನ ಜಾಥಾ ಸುಳ್ಯ ಮುಖ್ಯ ರಸ್ತೆ ಮೂಲಕ ಸಾಗಿ ಬಂತು.
ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಂಡಿದ್ದು, ಇಂದು(ಆಗಸ್ಟ್ ೦೮) ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾ ಆರಂಭಗೊಂಡಿತು. ಈ ಪ್ರಯುಕ್ತ ಮುಖ್ಯ ಪೇಟೆಯಲ್ಲಿ ಸಾಗಿ ಬಂದ ವಾಹನ ಜಾಥಾ ನ್ಯಾಯಕ್ಕಾಗಿ ಹೋರಾಟ ಎಂಬ ಒಕ್ಕೋರಲ ಕೂಗು ಕೇಳಿ ಬಂತು.
ಇಂದು ಬೆಳಗ್ಗೆ ನಿಂತಿಕಲ್ಲಿನಿಂದ ಪ್ರತಿಭಟನೆಗೆ ಚಾಲನೆ ನೀಡಲಾಗಿದ್ದು,ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ವಾಹನ ಜಾಥಾ ಆರಂಭಗೊಂಡಿತು.ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದು,ನಿಂತಿಕಲ್ಲಿನಿಂದ ಹೊರಟ ವಾಹನ ಜಾಥಾ ಪೈಚಾರಿಗೆ ತಲುಪಿ ಅಲ್ಲಿಂದ ನಡಿಗೆಯ ಮೂಲಕ ಸುಳ್ಯಕ್ಕೆ ಆಗಮಿಸಿತು.
ಸೌಜನ್ಯಳಿಗೆ ಈ ಬಾರಿ ನ್ಯಾಯ ಸಿಗಲೇ ಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು ಜಸ್ಟೀಸ್ ಫಾರ್ ಸೌಜನ್ಯ ಎಂಬ ಕೂಗು ಮುಗಿಲು ಮುಟ್ಟಿತ್ತು. ಪ್ರತಿಭಟನೆಯಲ್ಲಿ ಜಾತಿ,ಮತ,ಪಂಥ ಭೇಧವಿಲ್ಲದೇ ಎಲ್ಲರೂ ಪಾಲ್ಗೊಂಡು ಈ ಜಾಥಾಕ್ಕೆ ಕೈ ಜೋಡಿಸಿದ್ದಾರೆ.
ಈ ಹಿಂದೆ ಸುಳ್ಯದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ವಸಂತ್, ಸೌಜನ್ಯಳ ಹತ್ಯೆ ನಡೆದು ೧೧ ವರ್ಷವಾಗಿದೆ. ನಿರಪರಾಧಿಯನ್ನು ಅಪರಾಧಿ ಮಾಡಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯದ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಿದೆ. ಈ ಕೂಡಲೇ ಸೌಜನ್ಯ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು , ಇನ್ನೇನು ಕೆಲವೇ ಕ್ಷಣಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.