ನ್ಯೂಸ್ ನಾಟೌಟ್: ಉದ್ಯಾನನಗರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಪ್ರಯಾಣಿಕರನ್ನು ಬಿಟ್ಟು ವಿಮಾನವೊಂದು ಹಾರಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಕಳೆದ ಶುಕ್ರವಾರ ಆಗಸ್ಟ್ 4ರಂದು ಮಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವೂ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಮಾಡಿದ್ದರ ಪರಿಣಾಮವಾಗಿ 6 ಜನ ಪ್ರಯಾಣಿಕರಿಗೆ ವಿಮಾನ ತಪ್ಪಿದ್ದು, ಮಾಡದ ತಪ್ಪಿಗೆ ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾಯ ಬೇಕಾದ ಶಿಕ್ಷೆಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಇಂಡಿಗೋ 6E 6162 ವಿಮಾನವೂ ಶುಕ್ರವಾರ ಮಧ್ಯಾಹ್ನ 2.55ಕ್ಕೆ ಹಾರಾಟ ಆರಂಭಿಸಬೇಕಿದ್ದು, ನಿಗದಿತ ಅವಧಿಗೂ ಮುನ್ನ, ಅಂದರೆ ಮಧ್ಯಾಹ್ನ 2.43ಕ್ಕೆ ಹೊರಟ ಪರಿಣಾಮದಿಂದಾಗಿ 6 ಜನ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದ್ದು, ವಿಮಾನ ಹತ್ತಲು ತೆರಳುವ ವೇಳೆಯಲ್ಲಿ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತಿಳಿದು ಬಂದಿದೆ.
ಇದೇ ವಿಮಾನದಲ್ಲಿ ಪ್ರಯಾಣ ಮಾಡಬೇಕಿದ್ದ ಹೆಸರು ಹೇಳಲು ಇಚ್ಚಿಸದ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿ, ‘ಮಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದು, ವಿಮಾನ ಹಾರಾಟದ ಸಮಯ ಬದಲಾವಣೆಯಾಗಿರುವ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. 2.55ರ ಇಂಡಿಗೋ ವಿಮಾನ ತಪ್ಪಿದ ಕಾರಣದಿಂದಾಗಿ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದಂತೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯುವ ದುಸ್ಥಿತಿಗೆ ದೂಡಿದ್ದರು. ರಾತ್ರಿ 8.20ಕ್ಕೆ ಇನ್ನೊಂದು ವಿಮಾನಕ್ಕಾಗಿ ಕಾಯ್ದು ಕುಳಿತು ಅದರ ಮೂಲಕ ಮಂಗಳೂರಿಗೆ ತಲುಪಿದ್ದೇವೆ. ನಾವು ಮನೆ ಸೇರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು, ಒಂದು ವೇಳೆ ಬಸ್ನಲ್ಲಿ ತೆರಳಿದ್ದರೇ ಅದಕ್ಕಿಂತ ಬೇಗವೇ ಮಂಗಳೂರು ತಲುಪಬಹುದಿತ್ತೇನೋ’ ಎಂದು ವಿಮಾನಯಾನ ಸಂಸ್ಥೆಯ ವರ್ತನೆಯನ್ನು ಟೀಕಿಸಿದ್ದಾರೆ.
ಪ್ರಯಾಣಿಕರ ಆರೋಪವನ್ನು ಅಲೆಗೆಳೆದಿರುವ ಇಂಡಿಗೋ ವಿಮಾನಯಾನ ಸಂಸ್ಥೆಯೂ ‘ವಿಮಾನಕ್ಕೆ ಹತ್ತುವ ಬಾಗಿಲುಗಳು ಮಧ್ಯಾಹ್ನ 2.43ಕ್ಕೆ ಮುಚ್ಚಿದ್ದು, ನಿಲ್ದಾಣದಿಂದ 2.57ಕ್ಕೆ ವಿಮಾನ ಹಾರಾಟ ಆರಂಭಿಸಿದೆ. ತೊಂದರೆಗೊಳ್ಳಪಟ್ಟ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ಮೂಲಕ ಮಂಗಳೂರು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು’ ಎಂದು ಆರೋಪದ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ.