ನ್ಯೂಸ್ ನಾಟೌಟ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬೃಹತ್ ಪ್ರತಿಮೆಯೊಂದು ನಿರ್ಮಾಣವಾಗಲಿಕ್ಕೆ ದಿನಗಣನೆ ಆರಂಭವಾಗಿದೆ. ಈ ಪ್ರತಿಮೆಯು ಗುಜರಾತ್ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ, ಏಕತಾ ಮೂರ್ತಿಗಿಂತ ಎತ್ತರದಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.
ಪುಣೆ ಬಳಿಯ ಲವಾಸ ನಗರದಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ಮೋದಿ ಪ್ರತಿಮೆ ಸಹಜವಾಗಿಯೇ ಸಾಕಷ್ಟು ಕುತೂಹಲ ಕೆರಳಿಸಿದೆ. ಸರ್ಕಾರ ಈ ಪ್ರತಿಮೆಯನ್ನು ನಿರ್ಮಿಸುತ್ತಿದೆಯೇ ? ಅಥವಾ ಯಾವುದಾದರೂ ವ್ಯಕ್ತಿಗಳು ಮೋದಿಯ ಪ್ರತಿಮೆ ನಿರ್ಮಿಸುತ್ತಿದ್ದಾರೆಯೇ ಅನ್ನುವುದರ ಬಗ್ಗೆ ಸಾಕಷ್ಟು ಕುತೂಹಲ ಎದ್ದಿದೆ. ಈ ಎಲ್ಲ ಕುತೂಹಲಗಳಿಗೆ ಈಗ ತೆರೆ ಎಳೆಯುವ ಸಮಯವೂ ಹತ್ತಿರಕ್ಕೆ ಬಂದಿದೆ.
ಮೋದಿ ಪ್ರತಿಮೆಯ ವಿಚಾರ ಇದೇನು ಸರ್ಕಾರದ ಯೋಜನೆ ಅಲ್ಲ. ನರೇಂದ್ರ ಮೋದಿ ಮೇಲಿನ ಅಭಿಮಾನದಿಂದಾಗಿ ಖ್ಯಾತ ಕಂಪನಿ ಡಾರ್ವಿನ್ ಪ್ಲಾಟ್ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಿಂದ (DPIL) ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ಏಕತಾ ಮೂರ್ತಿಯು 182 ಮೀಟರ್ ಎತ್ತರ ಹೊಂದಿದೆ. ಆದರೆ, ನರೇಂದ್ರ ಮೋದಿ ಮೂರ್ತಿಯು 190,-200 ಮೀ. ಇರಲಿದೆ. ಹಾಗಾಗಿ, ಇದು ವಿಶ್ವದಲ್ಲೇ ಎತ್ತರದ ಮೂರ್ತಿ ಎಂಬ ಖ್ಯಾತಿಗೆ ಭಾಜನವಾಗಲಿದೆ. 2023ರ ಡಿಸೆಂಬರ್ 31ರಂದು ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
“ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತಕ್ಕೆ ಹೊಸ ದೃಷ್ಟಿಕೋನ ಸಿಕ್ಕಿದೆ. ದೇಶಕ್ಕೆ ಮೋದಿ ನೀಡಿದ ಕೊಡುಗೆಯನ್ನು ಸ್ಮರಿಸುವ ದೃಷ್ಟಿಯಿಂದಾಗಿ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ” ಎಂದು ಡಿಪಿಐಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (CMD) ಅಜಯ್ ಹರಿನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪುಣೆ ಬಳಿಯ, ಮುಲ್ಶಿ ತಾಲೂಕಿನ ವ್ಯಾಪ್ತಿ ಲವಾಸ ನಗರದ ಖಾಸಗಿ ಹಿಲ್ ಸ್ಟೇಷನ್ನಲ್ಲಿ ನರೇಂದ್ರ ಮೋದಿ ಅವರ ಮೂರ್ತಿ ನಿರ್ಮಿಸಲಾಗುತ್ತದೆ. ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣವು (NCLT) ಅನುಮೋದನೆ ನೀಡಿದೆ. ಮತ್ತೊಂದು ವಿಶೇಷ ಏನೆಂದರೆ, ಎನ್ಸಿಪಿ ವರಿಷ್ಠ ಅಜಿತ್ ಪವಾರ್ ಅವರ ಅಳಿಯ ಸದಾನಂದ ಸುಳೆ ಅವರು ಯೋಜನೆಯ ಪ್ರಮೋಟರ್ ಆಗಿದ್ದಾರೆ.