ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆ ಉಚಿತ ವಿದ್ಯುತ್ ಬಿಲ್ ನೀಡಿಕೆ ಆ. 1 ರಿಂದ ಆರಂಭಗೊಂಡಿದೆ. ಇದೀಗ ಇಂದು(ಆಗಸ್ಟ್ 05) ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತ ಚಾಲನೆ ನೀಡಿದರು.
ಮೊದಲ ತಿಂಗಳಲ್ಲಿ 1.42 ಕೋಟಿ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಲಿದ್ದು, ಜುಲೈ 27ಕ್ಕೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ ಎಂದು ತಿಳಿದು ಬಂದಿದೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ನಲ್ಲಿ ಪ್ರಯೋಜನ ಸಿಗಲಿದೆ ಎಂದು ಈ ಹಿಮದೆಯೇ ಮಾಹಿತಿ ನೀಡಲಾಗಿತ್ತು.
ಆಗಸ್ಟ್ 1ರಿಂದ ಶೂನ್ಯ ಬಿಲ್ ವಿತರಣೆ ಮಾಡಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಅಧಿಕೃತ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆ.ಜೆ. ಜಾರ್ಜ್ ಮೊದಲಾದವರು ಭಾಗವಹಿಸಿದ್ದರು. ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ಬಿಲ್ ವಿತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ 1.42 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಿಂದ ಅನುಕೂಲವಾಗಲಿದೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಈ ಯೋಜನೆಯಿಂದ ಕುಟುಂಬದ ನಿರ್ವಹಣಾ ವೆಚ್ಚ ಕಡಿಮೆಯಾಗಲಿದ್ದು, ಆರ್ಥಿಕ ಪ್ರಗತಿ ಸಾಮಾಜಿಕ ಭದ್ರತೆ ಸಿಗಲಿದೆ ಎಂದು ಹೇಳಿದರು.
ಯೋಜನೆ ಅನುಷ್ಠಾನದ ಮೊದಲ ತಿಂಗಳಿನಲ್ಲಿ 1.42 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಜುಲೈ 27ಕ್ಕೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕ ಶೂನ್ಯವಾಗಿರುತ್ತದೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್ ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟಂಬರ್ ಬಿಲ್ ನಲ್ಲಿ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.ಗೃಹಜ್ಯೋತಿ ಯೋಜನೆ ನೋಂದಣಿ ಮಾಡಿಕೊಳ್ಳಲು ಅಂತಿಮ ದಿನಾಂಕ ಘೋಷಿಸಿಲ್ಲ. ಯಾವಾಗ ನೋಂದಾಯಿಸಿಕೊಂಡರೂ ಅದರ ನಂತರದ ತಿಂಗಳಿನಿಂದ ಸೌಲಭ್ಯ ಪಡೆಯಬಹುದು ಎಂದು ಹೇಳಿದರು.
ಗೃಹಜ್ಯೋತಿ ಉದ್ಘಾಟನೆ ವೇಳೆ 20 ಸಾವಿರ ಜನರಿಗೆ ಲಾಡು ಸೇರಿದಂತೆ ಭರ್ಜರಿ ಊಟಕ್ಕೆ ಸಿದ್ಧತೆ ಮಾಡಲಾಗಿದೆ.ಎನ್.ವಿ. ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಗೃಹ ಜ್ಯೋತಿ ಜತೆಗೆ ಕಾಂಗ್ರೆಸ್ ಪವರ್ ಶೋವನ್ನು ಕೂಡ ಪ್ರದರ್ಶಿಸಲಿದ್ದಾರೆ.