ನ್ಯೂಸ್ ನಾಟೌಟ್ : ಇತ್ತೀಚೆಗೆ ಸೆಲ್ಫಿ ಗೀಳಿಗೆ ಪ್ರಾಣ ಕಳೆದು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.ಅದರಲ್ಲೂ ಯುವಕರೇ ಬಲಿಯಾಗ್ತಾ ಇರೋದು ದುರಂತದ ಸಂಗತಿ.ಇತ್ತೀಚೆಗಷ್ಟೇ ಉಡುಪಿಯ ಅರಿಶಿನಗುಂಡಿ ಎಂಬಲ್ಲಿ ಜಲಪಾತ ವೀಕ್ಷಿಸಲೆಂದು ತೆರಳಿದ್ದ ಯುವಕ ರೀಲ್ಸ್ ಮಾಡಲು ಹೋಗಿ ನೀರು ಪಾಲಾಗಿದ್ದ ಘಟನೆ ವರದಿಯಾಗಿತ್ತು.ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.ಸೆಲ್ಫಿ ತೆಗೆದುಕೊಳ್ಳಲೆಂದು ಹೊರಟ ವ್ಯಕ್ತಿಯೊಬ್ಬ ನೀರು ಪಾಲಾದ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಕೊಡಗಿಗೆ ಪ್ರವಾಸಕ್ಕೆ ತೆರಳಿದ್ದ ಸಂದೀಪ್, ಗೋವಿಂದರಾಜು, ರಾಮ್ಕುಮಾರ್ ಮತ್ತು ರಂಜಿತ್ ಎಂಬವರು ಗುರುವಾರ ಸಂಜೆ ಹಾರಂಗಿ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೃತ್ತಿಯಲ್ಲಿ ಟ್ಯಾಟೂ ಕಲಾವಿದರಾಗಿರುವ ಸಂದೀಪ್(46) ಸೇತುವೆಯ ಅಂಚಿನಿಂದ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಾರಿ ನೀರಿಗೆ ಬಿದ್ದಿದ್ದಾರೆ.
ಪ್ರವಾಸಿಗರೊಬ್ಬರು ಕೊಡಗಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗನ ಪತ್ತೆಗಾಗಿ ಗುರುವಾರ ಸಂಜೆಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂದೀಪ್ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಜಲಾಶಯದಿಂದ ನೀರು ಹೊರಬಿಡುವುದನ್ನು ನಿಲ್ಲಿಸಿದ್ದಾರೆ. ಘಟನೆ ನಡೆದಾಗ ಪ್ರವಾಸಿಗರು ಕುಡಿದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ.ದುಬಾರೆಯಿಂದ ತೆಪ್ಪದ ತಂಡಗಳು ಆಗಮಿಸಿದ್ದು, ಶೋಧ ಕಾರ್ಯದಲ್ಲಿ ತೊಡಗಿವೆ ಎನ್ನಲಾಗಿದೆ.
ಕಳೆದ ಕೆಲದಿನಗಳಿಂದ ಕೊಡಗು , ದಕ್ಷಿಣಕನ್ನಡ ಸೇರಿದಂತೆ ಹಲವೆಡೆ ಮಳೆಯ ಪ್ರಮಾಣ ಜಾಸ್ತಿಯಾಗಿತ್ತು.ಹೀಗಾಗಿ ನೀರು ರಭಸದಿಂದ ಹರಿಯುತ್ತಾ ಇರೋದ್ರಿಂದ ಪ್ರವಾಸಿಗರು , ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಒಳಿತು.ಸಲ್ಫಿ ,ರೀಲ್ಸ್ ಅಂತೆಲ್ಲಾ ಹೇಳಿ ಧುಮ್ಮಿಕ್ಕಿ ಹರಿಯುವ ಜಲಪಾತಗಳಿಗೋ, ಅಥವಾ ಮೈದುಂಬಿ ಹರಿಯುತ್ತಿರುವ ನದಿ ಕಡೆಗಳಿಗೋ ಹೋಗೋದನ್ನು ಆದಷ್ಟು ಕಡಿಮೆ ಮಾಡಿದ್ರೆ ಒಳ್ಳೆಯದು.
ಯಾಕೆಂದ್ರೆ ಯಾವುದೋ ಒಂದು ಸಣ್ಣ ನೆಪದಿಂದ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಲಬೇಕಾದ ಪರಿಸ್ಥಿತಿ ಎದುರಾಗಬಹುದು.ಹೋದ ಜೀವವನ್ನು ಮರಳಿ ಪಡೆಯಲು ಸಾದ್ಯವಿಲ್ಲ.ನಮ್ಮ ಜೀವವನ್ನು ನಂಬಿಕೊಂಡು ಕುಟುಂಬಸ್ಥರು ಇರೋದ್ರಿಂದ ಅಪಾಯಕಾರಿ ಸ್ಥಳಗಳಲ್ಲಿ ಇಂತಹ ಮೊಂಡುತನ ಪ್ರದರ್ಶಿಸಲೇ ಬಾರದು.