ನ್ಯೂಸ್ ನಾಟೌಟ್ : ಅಪಾರ್ಟ್ ಮೆಂಟ್ ವೊಂದರ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೆಡಿಕಲ್ ವಿದ್ಯಾರ್ಥಿಯೊಬ್ಬ ದುರಂತ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಸಮಯ್ (21) ಸಾವನ್ನಪ್ಪಿದ ಮೆಡಿಕಲ್ ವಿದ್ಯಾರ್ಥಿ (Student death) ಎಂದು ತಿಳಿದು ಬಂದಿದೆ. ಮೂಲತಃ ಅಡ್ಯಾರ್ ನಿವಾಸಿಯಾಗಿದ್ದು, ಸದ್ಯ ಕದ್ರಿ ಶಿವಭಾಗ್ ನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳೂರು ನಗರದ ಕದ್ರಿ ಶಿವಭಾಗ್ನಲ್ಲಿರುವ ಅಪಾರ್ಟ್ಮೆಂಟ್ (Managalore Apartment) ಇದಾಗಿದ್ದು,ಯುವಕ ಐದನೇ ಮಹಡಿಯಿಂದ ಜಾರಿ ಬಿದ್ದಿರುವುದರ ಬಗ್ಗೆ ವರದಿಯಾಗಿದೆ.ಭಾನುವಾರ ಮುಂಜಾನೆ ವೇಳೆ ಫ್ಲ್ಯಾಟ್ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದರು ಎಂದು ಹೇಳಲಾಗಿದೆ.
ಆಗ ಅವರ ತಾಯಿ ಕಾರು ವಾಷ್ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು ಎನ್ನಲಾಗಿದ್ದು,ಈ ವೇಳೆ ಮಗ ಸಮಯ್ ಅವರು ಬಾತ್ರೂಂಗೆ ಹೋಗಿ ಬಂದು ಬಕೆಟ್ ತಗೊಂಡು ಹೋಗಿದ್ದಿಯಮ್ಮಾ ಎಂದು ಕೇಳಿದ್ದು,ಈ ವೇಳೆ ಬಾಲ್ಕನಿಯಿಂದ ಬಾಗಿದ್ದ ಅವರು ಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಮಳೆ ಬಂದಿರುವುದರ ಪರಿಣಾಮ ಬಾಲ್ಕನಿ ಒದ್ದೆಯಾಗಿತ್ತು.ಇದೇ ವೇಳೆ ಬಾಗಿದ ಕಾರಣ ಜಾರಿ ಕೆಳಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮಯ್ ಅವರು ತಂದೆ ತಾಯಿಯ ಹಿರಿಯ ಮಗನಾಗಿದ್ದು, ತಂದೆ ಸಿವಿಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.