ನ್ಯೂಸ್ ನಾಟೌಟ್: ಐ.ಎ.ಎಸ್. , ಕೆ.ಎ.ಎಸ್ ನಂತಹ ಪರೀಕ್ಷೆಗಳನ್ನು ಬರೆದು ತಾನೊಬ್ಬ ಅಧಿಕಾರಿಯಾಗಬೇಕೆನ್ನುವು ಹಲವರ ಕನಸು.ಆದರೆ ಅದು ಎಲ್ಲರಿಗೂ ಒಲಿದು ಬರೋದಿಲ್ಲ.ಅದಕ್ಕಾಗಿ ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಅತ್ಯಗತ್ಯ.ಆದರೆ ಇಲ್ಲೊಬ್ಬರು ನಟಿ ಈ ಸಾಧನೆ ಮಾಡಿದ್ದಾರೆ.ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಇವರು ಇಂದು ಐಎಎಸ್ ಅಧಿಕಾರಿಯಾಗಿ ಇತರರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ಅನೇಕ ಚಲನಚಿತ್ರಗಳಲ್ಲಿ ಬಾಲ ನಟಿಯಾಗಿ ಖ್ಯಾತಿ ಪಡೆದ ಎಚ್.ಎಸ್. ಕೀರ್ತನಾ ಅವರು ಇದೀಗ ಮಂಡ್ಯದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಶುರು ಮಾಡಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ದೊರೆ’ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದ್ದ ಎಚ್.ಎಸ್. ಕೀರ್ತನಾ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆಯ ಸಂಗತಿ.
ಬಾಲನಟಿಯಾಗಿದ್ದರೂ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಚಿತ್ರರಂಗದಲ್ಲಿ ಮುಂದುವರಿಯದೇ ಈ ಫೀಲ್ಡನ್ನು ಆಯ್ದುಕೊಂಡಿದ್ದು ವಿಶೇಷವೆಂಬಂತಿದೆ.ಸತತ ಐದು ಬಾರಿ UPSC ಪರೀಕ್ಷೆಯನ್ನು ಬರೆದು ವಿಫಲಗೊಂಡಿದ್ದರು. ಆದರೂ ಮರಳಿ ಪ್ರಯತ್ನವ ಮಾಡು ಎಂಬಂತೆ ಎಂದಿಗೂ ಭರವಸೆಯನ್ನು ಕಳೆದುಕೊಳ್ಳಲೇ ಇಲ್ಲ.ಇಲ್ಲ ನಾನು ಹೇಗಾದರೂ ಮಾಡಿ ಸಾಧನೆ ಮಾಡಲೇ ಬೇಕು.ಪರೀಕ್ಷೆ ಎದುರಿಸಿ ಪಾಸಾಗಲೇ ಬೇಕು ಎಂದು ಹಠ ಮಾಡಿ ಮತ್ತೆ ಪರೀಕ್ಷೆ ಬರೆದರು.ಆರನೇ ಬಾರಿ ಪರೀಕ್ಷೆ ಬರೆದಾಗ ಯಶಸ್ವಿಯಾಗಿದ್ದಾರೆ..!
ಈ ನಟಿ ಆರಂಭದಲ್ಲಿ ನಂದಿನಿ ಲೇಔಟ್ ಅಣ್ಣಮ್ಮ ಉತ್ಸವವೊಂದರಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಚಿತ್ರರಂಗವನ್ನು ಪ್ರವೇಶಿಸಿದರು.ರಾಷ್ಟ್ರೀಯ ಬಾಲ ಪುರಸ್ಕಾರ, ರಾಜ್ಯ ಪ್ರಶಸ್ತಿಗೂ ಭಾಜನರಾದ ಇವರು ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ಸಿಂಹಾದ್ರಿ ಮತ್ತು ಟಿವಿ ಧಾರಾವಾಹಿಗಳಾದ ಜನನಿ, ಚಿಗುರು ಮತ್ತು ಪುಟಾಣಿ ಏಜೆಂಟ್ ಹೀಗೆ 32ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕೀರ್ತನಾ UPSC ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗೋದು ಹೇಗೆ?ಎನ್ನುವ ಬಗ್ಗೆ ತಿಳಿದುಕೊಂಡು ಅದಕ್ಕೆ ಪೂರಕವಾದ ಪುಸ್ತಕಗಳನ್ನು ಸಂಗ್ರಹಿಸುವುದಕ್ಕೆ ಶುರು ಮಾಡಿದರು.ಬಳಿಕ ಓದೋದಕ್ಕೆ ಆರಂಭಿಸಿದರು.
ಕೀರ್ತನಾ 2011ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಗೆ ಹಾಜರಾಗಿದ್ದರು. ಮಾತ್ರವಲ್ಲ, ಅದರಲ್ಲಿ ತೇರ್ಗಡೆಯಾಗಿದ್ದು, ಎರಡು ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ತಂದೆ ಕಂಡ ಕನಸು ನನಸು ಮಾಡಬೇಕು ಎನ್ನುತ್ತಾ ಪ್ರತಿದಿನ ತಂದೆಯ ಕನಸನ್ನು ನೆನಪಿಕೊಳ್ಳುತ್ತಾ ಅಧಿಕಾರಿಯಾಗಲು ಏನೆಲ್ಲಾ ಮಾಡಬೇಕೋ ಅದನ್ನ ಸಂಪೂರ್ಣಗೊಳಿಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ.ಕೆಎಎಸ್ ಅಧಿಕಾರಿಯಾದ ಬಳಿಕ ತಾನು ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ 2020ರಲ್ಲಿ ಆರನೇ ಬಾರಿಗೆ ಪರೀಕ್ಷೆ ಬರೆದು ಅಖಿಲ ಭಾರತ ಶ್ರೇಣಿ (AIR)ಯಲ್ಲಿ 167ನೇ ರ್ಯಾಂಕ್ ಪಡೆದುಕೊಂಡು IAS ಅಧಿಕಾರಿಯಾದರು.
ಮಗಳು ಸಿವಿಲ್ ಅಧಿಕಾರಿಯಾಗಬೇಕು ಎಂದು ಕೀರ್ತನಾ ತಂದೆ ಕನಸು ಕಂಡಿದ್ದರು.ಆದರೆ ಕೀರ್ತನಾ ಐಎಎಸ್ ಅಧಿಕಾರಿಯಾಗಿ ಇಂದು ಸೇವೆ ಸಲ್ಲಿಸುತ್ತಿದ್ದಾರೆ.ತಂದೆ ಮೈಸೂರು ಲ್ಯಾಂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ಅವರು 2013ರಲ್ಲಿ ನಿಧನರಾದರು.ಆದರೆ ಇಂದು ಅವರು ಜೀವಂತರಾಗಿರುತ್ತಿದ್ದರೆ ಮಗಳ ಸಾಧನೆ ಕಂಡು ಎಷ್ಟು ಖುಷಿ ಪಡುತ್ತಿದ್ದರೇನೋ…