ನ್ಯೂಸ್ ನಾಟೌಟ್ : ದೇಶ ಕಾಯುವ ಯೋಧರೆಂದರೆ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತದೆ.ಮನೆ-ಮಠ ತೊರೆದು ತಂದೆ -ತಾಯಿ , ಹೆಂಡತಿ ಮಕ್ಕಳಿಂದಲೂ ದೂರವಿದ್ದು, ದೇಶ ರಕ್ಷಣೆಗಾಗಿ ನಿಲ್ಲುವ ಭಾರತಾಂಬೆಯ ಪುತ್ರರಿವರು.ಪ್ರತಿನಿತ್ಯ ದೇಶ ರಕ್ಷಣೆಯೇ ನಮ್ಮ ಹೊಣೆ ಎಂದು ಜಪಿಸುತ್ತಿರುವ ಯೋಧರು ಅಪರೂಪಕ್ಕೆ ರಜೆ ಸಿಕ್ಕಾಗ ಊರಿಗೆ ಬಂದು ತಮ್ಮ ಕುಟುಂಬ ಸದಸ್ಯರ ಜತೆಗೆ ಒಂದಷ್ಟು ಸಮಯ ಕಳೆದು ಮತ್ತೆ ನಿಗದಿಯಾದ ದಿನಾಂಕದಂದೇ ಡ್ಯೂಟಿಗೆ ಹಾಜರಾಗುತ್ತಾರೆ. ಹೀಗೆ ಇಲ್ಲೊಬ್ಬರು ಭಾರತೀಯ ಸೇನೆಯ ಯೋಧ ಈದ್ ಹಬ್ಬದ ಹಿನ್ನೆಲೆಯಲ್ಲಿ ರಜೆ ಪಡೆದು ಮನೆಗೆ ತೆರಳಿದ್ದರು. ಆದರೆ ಅವರೀಗ ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಭಾರಿ ಆಘಾತವನ್ನುಂಟು ಮಾಡಿದೆ.
ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಚತಾಲ್ ಪ್ರದೇಶದಲ್ಲಿ ಇವರ ಮನೆಯಿದ್ದು,ಜಾವೇದ್ ಅಹ್ಮದ್ ವಾನಿ (25) ಅವರು ಶನಿವಾರದಂದು (ಜುಲೈ 29) ಸಂಜೆಯಿಂದಲೇ ನಾಪತ್ತೆಯಾಗಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ. ಹಾಗಾಗಿ, ಯೋಧನ ಪತ್ತೆಗಾಗಿ ಭದ್ರತಾ ಸಿಬ್ಬಂದಿಯು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದೇ ಪ್ರದೇಶದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಯೋಧನ ಕಾರು ಪತ್ತೆಯಾಗಿದೆ ಎನ್ನುವ ವಿಚಾರ ತಿಳಿದು ಬಂದಿದ್ದು, ಕಾರಿನಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಜಮ್ಮು-ಕಾಶ್ಮೀರ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ ಸಿಬ್ಬಂದಿಯಾಗಿರುವ ಇವರು, ಈದ್ ಹಬ್ಬದಲ್ಲಿ ಭಾಗಿಯಾಗಬೇಕೆಂದು ರಜೆ ಪಡೆದು ಮನೆಗೆ ಬಂದಿದ್ದರು.ಇವರು ನಾಳೆ (ಸೋಮವಾರ ಜುಲೈ 31ರಂದು) ಡ್ಯೂಟಿಗೆ ಹಾಜರಾಗಬೇಕಿತ್ತು.
ಮನೆಗೆ ತಲುಪಿದ್ದ ಯೋಧ ಜಾವೇದ್ ಅಹ್ಮದ್ ವಾನಿ ಅವರು ಶನಿವಾರ ಸಂಜೆ ದಿನಸಿ ತರಲೆಂದು ಚೌವಾಲ್ಗಾಮ್ಗೆ ತೆರಳಿದ್ದರು. ದಿನಸಿ ಖರೀದಿಸಿ ಕಾರಿನಲ್ಲಿ ಮನೆಗೆ ವಾಪಸ್ ಬರುವಾಗ ರಾತ್ರಿ ಎಂಟು ಗಂಟೆ ಸುಮಾರಿಗೆ ಇವರನ್ನು ಅಪಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ, ಅನ್ಲಾಕ್ ಆಗಿರುವ ಕಾರಿನಲ್ಲಿ ಯೋಧನ ಚಪ್ಪಲಿ ಹಾಗೂ ರಕ್ತದ ಕಲೆ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
ಜಾವೇದ್ ಅಹ್ಮದ್ ವಾನಿ ಅವರನ್ನು ಲಡಾಕ್ನಲ್ಲಿ ನಿಯೋಜಿಸಲಾಗಿದ್ದು, ಯೋಧನ ಪತ್ತೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದೆ.ಈ ಕುರಿತು ತನಿಖೆ ಮುಂದುವರಿದಿದ್ದು,ಹಲವು ಆಯಾಮಗಳಲ್ಲಿ ತನಿಖೆಯನ್ನು ಮಾಡಲಾಗುತ್ತಿದೆ.ಯೋಧನನ್ನು ಉಗ್ರರು ಸೇರಿ ಯಾವುದೇ ದುಷ್ಕರ್ಮಿಗಳು ಅಪಹರಿಸಿರುವ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.