ನ್ಯೂಸ್ ನಾಟೌಟ್: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಪಾಲನೆ ಮಾಡದಿರುವ 222 ವಾಹನ ಚಾಲಕರ ವಾಹನ ಚಾಲನಾ ಪರವಾನಗಿ (ಡಿಎಲ್) ರದ್ದು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಜುಲೈ 13 ರಿಂದ 26ರವರೆಗೂ ಅತಿ ವೇಗದ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ 113 ಚಾಲಕರ ಡಿಎಲ್ ರದ್ದತಿ ಮಾಡಲಾಗಿದೆ. ಅದೇ ರೀತಿ ಮದ್ಯ ಸೇವಿಸಿ ಚಾಲನೆ – 1, ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ 16, ವಾಹನ ಸಂಚಾರದಲ್ಲಿರುವಾಗಲೇ ಮೊಬೈಲ್ ಬಳಕೆ – 4, ಕೆಂಪು ಸಿಗ್ನಲ್ ಜಂಪಿಂಗ್ – 5, ಕಮರ್ಷಿಯಲ್ ವಾಹನಗಳಲ್ಲಿ ಅತೀ ಹೆಚ್ಚಿನ ಪ್ರಯಾಣಿಕರ ಸಾಗಾಟ – 4, ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣ – 3, ಹೆಲ್ಮೆಟ್ ಇಲ್ಲದೆ ಸಂಚಾರ – 59, ಸೀಟ್ ಬೆಲ್ಟ್ ರಹಿತ ಪ್ರಯಾಣ – 17 ಪ್ರಕರಣಗಳಲ್ಲಿ ಡಿಎಲ್ ರದ್ದು ಮಾಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಪ್ರತಿನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988/2019 ಅಡಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಡಿಎಲ್ ಗಳನ್ನು ಅಮಾನತ್ತು ಪಡಿಸಲು ಆದೇಶಿಸಿದೆ.
ಆದ್ದರಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಪಾಲನೆ ಮಾಡದಿರುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಕಳುಹಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.