ನ್ಯೂಸ್ ನಾಟೌಟ್: ಕಷ್ಟ ಹೇಳಿಕೊಂಡು ಪರಿಹಾರ ನೀಡುವಂತೆ ಕೇಳಿದ ಮಹಿಳೆಯೊಬ್ಬರಿಗೆ ನಂಬಿಸಿದ ನಕಲಿ ಜ್ಯೋತಿಷಿ ಅಮಾವಾಸ್ಯೆ ವಿಶೇಷ ಪೂಜೆ ನೆಪದಲ್ಲಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಈ ಕುರಿತು ವಂಚನೆಗೆ ಒಳಗಾದ ಹೆಂಗಸು ನೀಡಿರುವ ದೂರು ಆಧರಿಸಿ ಬಳ್ಳಾರಿ ಮೂಲದ ಸುರೇಶ್ ಪಾಟೀಲ್ (35) ಎಂಬುವವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದಾಖಲಿಸಲಾಗಿದೆ.
ಮಗಳಿಗೆ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದು, ಕೌಟುಂಬಿಕ ಜೀವನ ಚೆನ್ನಾಗಿರಲಿಲ್ಲ. ಪದೇ ಪದೆ ತವರು ಮನೆಗೆ ಆಗಮಿಸುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಮಗಳ ಕೌಟುಂಬಿಕ ಸಮಸ್ಯೆಯ ಬಗ್ಗೆ ಸಂಬಂಧಿಕರ ಬಳಿ ತಾಯಿ ಹೇಳಿಕೊಂಡಿದ್ದರು. ಸಂಬಂಧಿಕರ ಮೂಲಕ ಹೊಸಪೇಟೆಯ ಜ್ಯೋತಿಷಿ ಸುರೇಶ್ ಪಾಟೀಲ್ ಅವರ ಮನೆಗೆ ಆಗಮಿಸಿದ್ದರು ಎನ್ನಲಾಗಿದೆ.
”ನಿಮ್ಮ ಮಗಳ ಗ್ರಹಗತಿಗಳು ಚೆನ್ನಾಗಿಲ್ಲ. ಆಕೆಯ ಜೀವನ ಸರಿಪಡಿಸಬೇಕು ಎಂದರೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಗಳಿಗೆ ಹೋಗಬೇಕು. ಇದೇ ವೇಳೆ ನಾನು ವಿಶೇಷ ಪೂಜೆ ನೆರವೇರಿಸುತ್ತೇನೆ” ಎಂದು ಸುರೇಶ್ ತಿಳಿಸಿದ್ದ ಎನ್ನಲಾಗಿದೆ. ಜತೆಗೆ, ”ದೇವಾಲಯಗಳಿಗೆ ಹೋಗಿ ಬಂದ ಬಳಿಕ ಬೀರುವಿನ ಬಾಗಿಲು ತೆಗೆದು ನೋಡಬೇಕು” ಎಂದೂ ತಿಳಿಸಿದ್ದನಂತೆ.
ಮಾನಸಿಕವಾಗಿ ನೊಂದಿದ್ದ ಈ ಕುಟುಂಬ ಆತ ಹೇಳಿದಂತೆ ಅಮಾವಾಸ್ಯೆ ದಿನ ದೇವಾಲಯಕ್ಕೆ ಹೋಗಿದ್ದರು. ಮಾರನೇ ದಿನ ಮನೆಗೆ ಬಂದು ಬೀರುವಿನ ಬಾಗಿಲು ತೆರೆದಾಗ ಚಿನ್ನಾಭರಣ ಇರಲಿಲ್ಲ. ಬದಲಿಗೆ ನಿಂಬೆ ಹಣ್ಣು ಮಾತ್ರವೇ ಕಂಡು ಬಂದಿತ್ತು. ಇದರಿಂದ ಕಂಗಾಲಾದ ಮನೆಯ ಯಜಮಾನಿ ಸುರೇಶ್ಗೆ ದೂರವಾಣಿ ಕರೆ ಮಾಡಿ ಕೇಳಿದಾಗ ”ನಿಮ್ಮ ಬೀಗರು ಮನೆಗೆ ಮಾಟ ಮಂತ್ರ ಮಾಡಿಸಿದ್ದು, ಆಭರಣಗಳು ಮಾಯವಾಗಿವೆ. ಸ್ವಲ್ಪ ದಿನ ಕಳೆದ ಬಳಿಕ ನನ್ನ ಮಂತ್ರಸಿದ್ಧಿಯಿಂದ ವಾಪಸ್ ತರಿಸುತ್ತೇನೆ” ಎಂದು ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ.
ಇದಾದ ಕೆಲವೇ ದಿನಗಳಲ್ಲಿ ಸುರೇಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದರಿಂದ ತಾವು ಮೋಸ ಹೋಗಿರುವುದನ್ನು ಅರಿತುಕೊಂಡ ಆಕೆ, ಪೊಲೀಸರಿಗೆ ದೂರು ನೀಡಿದ್ದಾರೆ.