ನ್ಯೂಸ್ ನಾಟೌಟ್: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ತನಿಖೆ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಿವೃತ್ತ ನ್ಯಾಯಮೂರ್ತಿಗಳ ಮೂಲಕ ಸೌಜನ್ಯ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಸೌಜನ್ಯಳ ಭೀಕರವಾದ ಸಾವಿಗೆ ನ್ಯಾಯ ಒದಗಿಸಬೇಕು ಅನ್ನುವುದು ಬೇಡಿಕೆಯನ್ನು ಇಡಲಾಗಿದ್ದು ನಿಜವಾದ ಅಪರಾಧಿಗಳಿಗೆ ಕಾನೂನಿನಡಿ ತಕ್ಕ ಶಿಕ್ಷೆಯನ್ನು ನೀಡಬೇಕು ಅನ್ನುವ ಬೇಡಿಕೆಯನ್ನು ಇಡಲಾಗಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಮೃತ ಸೌಜನ್ಯಳ ಮಾವ ವಿಠಲ ಗೌಡ ಹೇಳಿದ್ದು ಹೀಗೆ, ನಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸಬೇಕು. ನಿಜವಾದ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದೇವೆ. ಇದೇ ವೇಳೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಜೊತೆ ಮಾತನಾಡಿದ ಸಿಎಂ ಸೌಜನ್ಯ ಕುಟುಂಬ ಆರ್ಥಿಕವಾಗಿ ಹಿಂದುಳಿದಂತೆ ಕಾಣುತ್ತಿದೆ ಎಂದು ಹೇಳಿದ್ರು. ಈ ವೇಳೆ ಇದಕ್ಕುತ್ತರಿಸಿದ ಬಂಗೇರರು ಹೌದು, ಆರ್ಥಿಕವಾಗಿ ಆ ಕುಟುಂಬ ವಕೀಲರನ್ನು ನೇಮಿಸಿ ಕೋರ್ಟ್ ವೆಚ್ಚಗಳನ್ನು ಭರಿಸುವಷ್ಟು ಶಕ್ತಿಯನ್ನು ಹೊಂದಿಲ್ಲ. ಹೀಗಾಗಿ ಸರ್ಕಾರದಿಂದ ವಕೀಲ ನೇಮಿಸಿ ಸೌಜನ್ಯ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಬಂಗೇರರು ಸಿಎಂ ಅನ್ನು ಒತ್ತಾಯಿಸಿದ್ದಾರೆ ಎಂದು ಸೌಜನ್ಯ ಮಾವ ವಿಠಲ ಗೌಡ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.