ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ರೀಲ್ಸ್ ಮಾಡಲೆಂದು ಹೋಗಿ ಯುವಕನೋರ್ವ ಕಾಲು ಜಾರಿ ಉಡುಪಿಯ(Udupi) ಅರಶಿನಗುಂಡಿ ಜಲಪಾತಕ್ಕೆ (Arsinagundi Falls) ಬಿದ್ದಿದ್ದ ಪ್ರಕರಣ ಇಡೀ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಎಷ್ಟೇ ಹುಡುಕಾಡಿದರೂ ಭದ್ರಾವತಿಯ ಯುವಕ ಶರತ್ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ.
ಇದೀಗ ಇಲ್ಲೊಂದು ಕಡೆ ಜಲಪಾತಕ್ಕೆಂದು ತೆರಳಿದ ತಂಡವೊಂದು ಇಡೀ ದಿನ ಸಮಸ್ಯೆಗೆ ಸಿಲುಕಿ ಒದ್ದಾಡಿದ ಪ್ರಸಂಗವೊಂದು ವರದಿಯಾಗಿದೆ.ತೆಲಂಗಾಣ ಜಿಲ್ಲೆಯ ವೆಂಕಟಾಪುರಂ ಮಂಡಲದಲ್ಲಿರುವ ರಾಜ್ಯದ ಅತಿ ಎತ್ತರದ ಜಲಪಾತವಾದ ಮುತ್ಯಾಲ ಧಾರಾ ಜಲಪಾತದಲ್ಲಿ ಈ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಸಮಸ್ಯೆಯ ಸುಳಿಯೊಳಗೆ ಸಿಲುಕಿದ್ದ 80 ಮಂದಿ ಪ್ರವಾಸಿಗರನ್ನು ಕೂಡ ಪೊಲೀಸರು ಹಾಗೂ ರಕ್ಷಣಾ ತಂಡ ಗುರುವಾರ ಬೆಳ್ಳಂಬೆಳಗ್ಗೆ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.
ಖಮ್ಮಂ, ಹನುಮಕೊಂಡ, ಕರೀಂನಗರ ಮತ್ತು ವಾರಂಗಲ್ನಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತವನ್ನು ಕಣ್ತುಂಬಿಕೊಳ್ಳಲು ಹೋಗಿದ್ದರು ಎಂದು ತಿಳಿದು ಬಂದಿದೆ. ಆದರೆ ಜಲಪಾತ ವೀಕ್ಷಿಸಿ ಹಿಂತಿರುಗುವ ವೇಳೆ ಭಾರಿ ಮಳೆ ಸುರಿದ ಪರಿಣಾಮ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಸಿಗರು ಅರಣ್ಯದ ನಡುವೆ ಸಿಲುಕಿಕೊಂಡಿದ್ದು,ಭಾರಿ ತೊಂದರೆ ಅನುಭವಿಸಿದ ಪ್ರಸಂಗ ನಡೆಯಿತು. ಅಲ್ಲದೆ ಭಾರಿ ಮಳೆಯಾಗುತ್ತಿದ್ದ ಪರಿಣಾಮ ಸರಿಯಾಗಿ ನೆಟ್ ವರ್ಕ್ ಇಲ್ಲದೇ ಫೋನ್ ಸಂಪರ್ಕವೂ ಸಿಗುತ್ತಿರಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ತುಂಬಾ ಸಮಯದ ಬಳಿಕ ಅಂದ್ರೆ ಸರಿಸುಮಾರು ರಾತ್ರಿ ವೇಳೆಗೆ ಪೊಲೀಸರಿಗೆ ಹೇಗೋ ಮಾಹಿತಿ ತಿಳಿಯಿತು.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ ಅಲ್ಲಿಂದ ಒಂದು ಕ್ಷಣವೂ ಯೋಚನೆ ಮಾಡದೇ ಸ್ಥಳಕ್ಕೆ ಧಾವಿಸಿದರು.
ರಾತ್ರೋ ರಾತ್ರಿ ಪೊಲೀಸರು ಹಾಗೂ ರಕ್ಷಣಾ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಹೇಗೋ ಬಚಾವ್ ಮಾಡಿದರು. ಸುಮಾರು ಐವತ್ತು ಜನರ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಈ ಕಾರ್ಯಾಚರಣೆಗಿಳಿದಿತ್ತು. ಬೆಳಿಗ್ಗೆಯಾಗುತ್ತಲೇ ಅಲ್ಲಿ ಸಿಲುಕಿದ್ದ ಎಲ್ಲ ಎಂಬತ್ತು ಮಂದಿ ಪ್ರವಾಸಿಗರನ್ನು ಕೂಡ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗದಿದ್ರೂ ತುಂಬಾ ಜನ ಕಂಗಾಲಾಗಿದ್ದರು.ಅದರಲ್ಲೂ ಓರ್ವ ಪ್ರವಾಸಿಗನ ಅರೋಗ್ಯ ಹದಗೆಟ್ಟಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಜಲಪಾತಗಳು ಭೋರ್ಗರೆಯುತ್ತಿವೆ.ಇಂತಹ ಜಲಪಾತಗಳನ್ನು ವೀಕ್ಷಿಸಲೆಂದು ಬರುವ ಪ್ರವಾಸಿಗರು ತುಸು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಸೂಚಿಸಲಾಗಿದೆ.ಭಾರಿ ಮಳೆಯಾಗುತ್ತಿರುವ ಹಿನ್ನಲೆ ಜಲಪಾತಗಳು ಅಪಾಯಕಾರಿ ಮಟ್ಟದಲ್ಲಿ ಹರಿದು ಬರುತ್ತಿದೆ.ಹೀಗಾಗಿ ರಣಭಯಂಕರ ಮಳೆಗೆ ಅಂತಹ ಜಾಗಕ್ಕೆ ಹೋಗುವುದರಿಂದ ದೂರವಿರುವುದೇ ಒಳ್ಳೆಯದು ಎನ್ನುವ ಸೂಚನೆಯನ್ನು ಕೂಡ ನೀಡಲಾಗಿದೆ.
ಇತ್ತೀಚೆಗಷ್ಟೇ ಉಡುಪಿಯಲ್ಲಿ ರೀಲ್ಸ್ ಗೀಳಿಗಾಗಿ ಜಲಪಾತದ ಬಂಡೆಕಲ್ಲುಗಳ ನಿಂತಿದ್ದ ಯುವಕನೋರ್ವ ಇದ್ದಕ್ಕಿದ್ದ ಹಾಗೆ ಕಾಲು ಜಾರಿ ನೀರು ಪಾಲಾಗಿದ್ದ. ಭದ್ರಾವತಿ ಮೂಲದ ಶರತ್ ಸ್ನೇಹಿತರ ಜತೆಗೂಡಿ ಜುಲೈ 24ರಂದು ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದ. ಈ ದೃಶ್ಯ ಆತನ ಗೆಳೆಯನ ಮೊಬೈಲ್ ನಲ್ಲಿ ಸೆರೆಯಾಗಿದ್ದು,ಈ ವಿಡಿಯೋ ಭಾರಿ ವೈರಲ್ ಕೂಡ ಆಗಿತ್ತು.ಆದರೆ ಮೃತದೇಹ ಇನ್ನೂ ಸಿಕ್ಕಿಲ್ಲ.