ನ್ಯೂಸ್ ನಾಟೌಟ್: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ. ಹೆಣವನ್ನು ಸ್ವೀಕರಿಸದೆ ಮಳೆಯನ್ನೂ ಲೆಕ್ಕಿಸದೆ ಕುಟುಂಬಸ್ಥರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ನೂಕಾಟ -ತಳ್ಳಾಟ ನಡೆದು ರಣಾಂಗಣವಾಗಿ ಮಾರ್ಪಟ್ಟ ಘಟನೆಯೂ ನಡೆಯಿತು.
ಜುಲೈ 2ರಂದು ಹೆರಿಗೆ ನೋವು ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ (36) ಆಸ್ಪತ್ರೆಗೆ ದಾಖಲಾಗಿದ್ದರು. ಸಿಜೆರಿನ್ ಮಾಡಿ ಡೆಲಿವರಿ ಮಾಡಬೇಕು ಎಂದು ಡ್ಯೂಟಿ ಡಾಕ್ಟರ್ ಹೇಳಿದ್ದರು. ಅಂದು ಭಾನುವಾರ ಆಗಿರುವುದರಿಂದ ಬರಲಾಗುವುದಿಲ್ಲ ಎಂದು ಮುಖ್ಯ ವೈದ್ಯೆ ತಿಳಿಸಿದ್ದಾರೆ. ಇದರಿಂದಾಗಿ ಡೆಲಿವರಿ ಮಾಡುವುದಕ್ಕೆ ಬದಲಿ ಡಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಶಿಲ್ಪಾ ಅವರಿಗೆ ಹೆಣ್ಣು ಮಗು ಆಯಿತು. ಈ ವೇಳೆ ವೈದ್ಯರು ಗರ್ಭಕೋಶವನ್ನೇ ತೆಗೆಯಬೇಕೆಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಇದಾಗಿ ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಬ್ರೇನ್ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 25ರಂದು ಐಸಿಯುನಲ್ಲಿ ಶಿಲ್ಪಾ ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ಶಿಲ್ಪಾ ಅವರ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಶಿಲ್ಪಾ ಅವರ ಡೆಲಿವರಿ ಮಾಡಿಸಬೇಕಿದ್ದ ವೈದ್ಯರು ಬಾರದೆ ಇದ್ದುದರಿಂದ ಬೇರೆ ವೈದ್ಯರ ಕೈನಿಂದ ಹೆರಿಗೆ ಮಾಡಿಸಿ ಶಿಲ್ಪಾ ಸಾವಿಗೆ ಕಾರಣವಾಗಿದ್ದಾರೆ. ಇದರ ನೇರ ಹೊಣೆಯನ್ನು ಆಸ್ಪತ್ರೆಗೆ ಸಂಬಂಧಪಟ್ಟ ಆಡಳಿತ ಮಂಡಳಿಯವರು ಹೊರಬೇಕು ಎಂದು ಶಿಲ್ಪಾ ಪತಿ ಪ್ರದೀಪ್ ಆಚಾರ್ಯರಿಂದ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ 174(3)(vi) ಸಿ.ಆರ್.ಪಿ.ಸಿ ಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಆಸ್ಪತ್ರೆ ಆಡಳಿತ ಸ್ಥಳಕ್ಕೆ ಬರುವಂತೆ ಮಳೆಯ ಮಧ್ಯೆ ಪ್ರತಿಭಟನೆ ನಡೆಯಿತು. ಈ ವೇಳೆ ಅಂಬ್ಯುಲೆನ್ಸ್ ತಡೆದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟವೂ ನಡೆಯಿತು.