ನ್ಯೂಸ್ ನಾಟೌಟ್ : ಶಾಸಕ ತನ್ವೀರ್ ಸೇಠ್ ಬರೆದ ಪತ್ರ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ (G. Parameshwara) ಪೊಲೀಸ್ ಇಲಾಖೆಗೆ ಬರೆದ ಪತ್ರ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಸರ್ಕಾರ ಮುಸ್ಲಿಂ ಓಲೈಕೆಗಾಗಿ ಸಂವಿಧಾನಬಾಹಿರವಾಗಿ ವರ್ತಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕರ್ನಾಟಕದ ಪೊಲೀಸರು ಆಳುವ ಸರ್ಕಾರದ ಆಳುಗಳಂತೆ ವರ್ತಿಸುವುದಕ್ಕೆ ಮುನ್ನ ಆ ದಿನ ಕೆಜಿಹಳ್ಳಿ, ಡಿಜೆಹಳ್ಳಿಯಲ್ಲಿ ನಡೆದ ಭೀಬತ್ಸ ಘಟನೆಯನ್ನು ನೆನಪು ಮಾಡಿಕೊಳ್ಳಲಿ ಎಂದು ಶಾಸಕ ವಿ.ಸುನೀಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಕೆಜಿಹಳ್ಳಿ, ಡಿಜೆಹಳ್ಳಿ, ಪೊಲೀಸ್ ಠಾಣೆಯ ಮೇಲೆ ನಡೆದ ಗೂಂಡಾ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಕೈ ಬಿಡುವಂತೆ ಸೂಚಿಸಿರುವುದು ಸಂಪೂರ್ಣ ಕಾನೂನು ಬಾಹಿರ ಎಂದು ಶಾಸಕ ಸುನೀಲ್ ಕುಮಾರ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಲೆಟರ್ ಹೆಡ್ನಲ್ಲಿರುವ ಟಿಪ್ಪಣಿ ಕುರಿತ ಪತ್ರ ಲಗ್ಗತಿಸಿ ಉಗ್ರ ಮನಸ್ಥಿತಿಯ ವ್ಯಕ್ತಿಗಳಿಗೆ ಅಮಾಯಕರ ಪಟ್ಟ ಕಟ್ಟಿ ದೇಶವನ್ನು ಸಿರಿಯಾ ಮಾಡುತ್ತೀರಾ? ಇದು ಗೃಹ ಸಚಿವರು ಸೂಚಿಸಿರುವುದು ನಿಜವೇ ಎಂದು ಅವರು ಪ್ರಶ್ನಿಸಿದ್ದಾರೆ.
ಶ್ರೀ ತಸ್ವೀರ್ ಸೇಠ್, ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರು. ನರಸಿಂಹರಾಜ ಕ್ಷೇತ್ರ ಇವರು ಸಲ್ಲಿಸಿರುವ ಮನವಿಯನ್ನು ಇದರೊಂದಿಗೆ ಲಗತ್ತಿಸಿದೆ. ಸದರಿ ಮನವಿಯಲ್ಲಿ, ಬೆಂಗಳೂರು ನಗರದ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ನಡೆದ ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳು, ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದು, ಸದರಿ ಮೊಕದ್ದಮೆಗಳನ್ನು ಮರು ಪರಿಶೀಲಿಸಿ ನಿಯಮಾನುಸಾರ ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಕೋರಲಾಗಿದೆ. ಈ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.