ನ್ಯೂಸ್ ನಾಟೌಟ್: ಉಡುಪಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಮೊಬೈಲ್ ಮೂಲಕ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿ ತಮ್ಮ ಕೋಮಿನ ಯುವಕರಿಗೆ ಕಳಿಸಿದ್ದಾರೆ ಅನ್ನುವ ಪ್ರಕರಣಕ್ಕೆ ಯಾವುದೇ ಸಾಕ್ಷಿಯಿಲ್ಲ. ಇದು ಸುಳ್ಳು ಸುದ್ದಿ ಅನ್ನುವಂತಹ ಮಾಹಿತಿಯನ್ನು ಸ್ವತಃ ಉಡುಪಿ SP ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಸಂಪೂರ್ಣ ತನಿಖೆಯನ್ನು ಮಾಡಿದ್ದೇವೆ. ತನಿಖೆ ವೇಳೆ ನಮಗೆ ವಿಡಿಯೋ ದಾಖಲೆಗಳು ಅದಕ್ಕೆ ಪೂರಕವಾಗಿರುವ ಸಾಕ್ಷಿಗಳು ಸಿಕ್ಕಿಲ್ಲ. ಇದು ಒಂದು ಸುಳ್ಳು ಸುದ್ದಿ ಅನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಬಗ್ಗೆ ವಿಡಿಯೋಗಳು ನಿಮಗೆ ಸಿಕ್ಕಿದರೆ ನಮ್ಮ ಗಮನಕ್ಕೆ ತರಬಹುದು ಎಂದು ಅಕ್ಷಯ್ ಮಚ್ಚೆಂದ್ರ ತಿಳಿಸಿದ್ದಾರೆ.ಈ ಬಗ್ಗೆ ಮತ್ತಷ್ಟು ವಿವರಿಸಿದ ಅವರು, ಕೆಲವರು ಬೇರೆ ಬೇರ ವಿಡಿಯೋಗಳನ್ನು ಕೂಡಿಸಿಕೊಂಡು ಆ ಮೂಲಕ ಬ್ಲ್ಯಾಕ್ ಮೇಲ್ ಮಾಡುವಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಘಟನೆ ಉಡುಪಿಯಲ್ಲಿ ನಡೆದೇ ಇಲ್ಲ. ಇದೊಂದು ವ್ಯವಸ್ಥಿತ ಪಿತೂರಿ ನಡೆದಿದೆ. ಸತ್ಯಾಂಶ ತಿಳಿದುಕೊಳ್ಳದೆ ಯಾರು ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸ ಆಗಬಾರದು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ಉಡುಪಿ ನಗರದ ಅಂಬಲಪಾಡಿ ಬೈಪಾಸ್ ಬಳಿ ಇರುವ ನೇತ್ರ ಜ್ಯೋತಿ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ತಮ್ಮ ಕೋಮಿನ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನು ಈ ವಿಡಿಯೋವನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ಬಳಿಕ ಕಾಲೇಜಿನಲ್ಲಿ ದೊಡ್ಡ ಗಲಾಟೆ ನಡೆದಿದೆ.
ಕಾಲೇಜಿನಲ್ಲಿ ವಿಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರ ಜೊತೆ ಇತರೆ ವಿದ್ಯಾರ್ಥಿನಿಯರು ವಾಗ್ವಾದ ಮಾಡಿದ್ದು, ಬಳಿಕ ಮಧ್ಯೆ ಪ್ರವೇಶ ಮಾಡಿದ ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿತ್ತು. ವಿಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ ಅನ್ನುವ ಸುದ್ದಿಗಳು ಹೊರಬಿದ್ದಿದ್ದವು. ಘಟನೆ ತಿಳಿಯುತ್ತಿದ್ದಂತೆ ಕಾಲೇಜಿಗೆ ತೆರಳಿದ್ದ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದವು ಎನ್ನಲಾಗಿತ್ತು. ಪ್ಯಾರಾ ಮೆಡಿಕಲ್ ಡಿಪ್ಲೊಮಾ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಶಬನಾಜ್, ಆಲ್ಫಿಯಾ ಮತ್ತು ಅಲಿಮಾತುಲ್ ಶಾಫಿಯಾ ಸಹಪಾಠಿ ವಿದ್ಯಾರ್ಥಿನಿ ವಾಶ್ ರೂಂನಲ್ಲಿರುವಾಗ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಈ ಎಲ್ಲ ಸುದ್ದಿಗಳು ನಕಲಿಯಾಗಿದ್ದು ಅಸಲಿ ಪ್ರಕರಣವೇ ಬೇರೆ ಇದೆ ಎಂದು ಎಸ್ಪಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.