ನ್ಯೂಸ್ ನಾಟೌಟ್ : ಧಾರಾಕಾರ ಮಳೆಗೆ ಸುಳ್ಯ ತಾಲೂಕು ಕಚೇರಿ ಕಟ್ಟಡವೂ ಸೋರುತ್ತಿದ್ದು, ಅಗತ್ಯ ದಾಖಲೆಗಳನ್ನು ಹೊಂದಿರುವ ತಾಲೂಕು ಕಚೇರಿಯ ಕಟ್ಟಡಕ್ಕೇ ಈ ಪರಿಸ್ಥಿತಿ ಬಂದಿದೆ….!
ನೀರು ಸೋರಿಕೆಯಿಂದಾಗಿ ಕಚೇರಿಯ ಒಳಗಡೆ ನೀರು ತುಂಬಿದೆ. ಪ್ರಮುಖ ಕಡತಗಳು ಹಾನಿಯಾಗುವ ಆತಂಕ ಎದುರಾಗಿದೆ. ಎರಡನೇ ಮಹಡಿಯಲ್ಲಿ ಹಲವಡೆ ನೀರು ಸೋರುತ್ತಿದೆ. ನೀರು ಸೋರಿಕೆಯಿಂದ ಕಚೇರಿಯ ನಿರ್ವಹಣೆಗೆ ತೊಂದರೆಯಾಗಿದೆ.
ಸರ್ವೇ ಇಲಾಖೆ ಕಚೇರಿಯಲ್ಲಿ ತುಂಬಿದ ನೀರು..!
ಮಿನಿ ವಿಧಾನಸೌಧದ ಹಲವೆಡೆ ನೀರು ಸೋರಿಕೆಯಾಗುತ್ತಿದ್ದು, ಸರ್ವೇ ಇಲಾಖೆಯ ಕಚೇರಿಯಲ್ಲೂ ನೀರು ತುಂಬಿದೆ. ಸಿಬ್ಬಂದಿಗೆ ಕಚೇರಿ ನಿರ್ವಹಣೆ ಜತೆಗೆ ಕಡತಗಳನ್ನು ನೀರಿನಿಂದ ರಕ್ಷಿಸುವುದು ಕೂಡ ಸವಾಲಿನ ಕೆಲಸವಾಗಿದೆ. ಭೂದಾಖಲೆ, ಪ್ರಮುಖ ಕಡತಗಳು ಹಾನಿಯಾಗುವ ಸಾಧ್ಯತೆಯಿದೆ.
ವಿಪರೀತ ಮಳೆಯಿಂದ ತಾಲೂಕು ಕಚೇರಿಯಲ್ಲಿ ನೀರು ಸೋರಿಕೆ ಉಂಟಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಶಾಸಕಿ ಭಾಗೀರಥಿ ಮುರುಳ್ಯ ಮಿನಿಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ತುರ್ತುಕ್ರಮದ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ್ ಅವರಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಸುಳ್ಯ ತಹಶೀಲ್ದಾರ್ ಮಂಜುನಾಥ್ ಕಚೇರಿ ಸಮಸ್ಯೆಯನ್ನು ಶಾಸಕಿಯವರ ಗಮನಕ್ಕೆ ತಂದು ಶೀಘ್ರ ದುರಸ್ತಿ ಬಗ್ಗೆ ಮನವಿ ಮಾಡಿದರು. ಈ ಸಂದರ್ಭ ಉಪ ತಹಶೀಲ್ದಾರ್ ಚಂದ್ರಕಾಂತ , ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಎಸ್.ಎನ್. ಮನ್ಮಥ, ಕಚೇರಿ ಸಿಬ್ಬಂದಿ ಮತ್ತಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.