ನ್ಯೂಸ್ ನಾಟೌಟ್ : ಯೂಟ್ಯೂಬ್ ಹಲವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.ಇತ್ತೀಚೆಗಷ್ಟೇ ಸ್ವಾತಂತ್ರ್ಯದ ಆ ದಿನಗಳಲ್ಲಿ ದೇಶ ವಿಭಜನೆ ವೇಳೆ ಪಾಕಿಸ್ತಾನದಲ್ಲಿದ್ದ ಸಹೋದರನೋರ್ವ ಭಾರತದಲ್ಲಿದ್ದ ಸಹೋದರನನ್ನು ಭೇಟಿಯಾಗುವಂತೆ ಮಾಡಿದ್ದ ಅಪರೂಪದ ಘಟನೆ ನಡೆದಿತ್ತು.ಅವರಿಬ್ಬರು ಭೇಟಿಯಾಗುವಂತೆ ಯೂಟ್ಯೂಬ್ ಸಹಕರಿಸಿತ್ತು.ಇದೊಂದು ಅವಿಸ್ಮರಣೀಯ ಕ್ಷಣವಾಗಿ ಮಾರ್ಪಟ್ಟಿತ್ತು.ಇದೀಗ ಅಂತಹುದೇ ಒಂದು ಘಟನೆ ಉಡುಪಿಯಲ್ಲಿ ನಡೆದಿದೆ.
ಹೌದು,ಈ ಕಥೆ ಸಿನಿಮೀಯ ಶೈಲಿಯಲ್ಲಿದೆ ಎಂದು ನಮಗನಿಸಿದರೂ ನೈಜ ಘಟನೆ.ಒಡಿಶಾ ಮೂಲದ ಬಾಲಕನೋರ್ವ ಕಳೆದ ೬ ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ. ಇದೀಗ ಆ ಬಾಲಕನೊಬ್ಬ 6 ತಿಂಗಳ ನಂತರ ಯೂಟ್ಯೂಬ್ ಸಹಾಯದಿಂದ ಹೆತ್ತವರನ್ನು ಮತ್ತೆ ಸೇರಿದ ಅಪರೂಪದ ಘಟನೆ ಉಡುಪಿಯಲ್ಲಿನಡೆದಿದೆ. ದೂರದ ಒಡಿಶಾದ ಬಾಲಕ ದೀಪಕ್ (19) ಸಮಾಜ ಸೇವಕನ ಮಾನವೀಯತೆಯಿಂದಾಗಿ ಮನೆಗೆ ಮರಳಿದ ಅಪರೂಪದ ಘಟನೆ ವರದಿಯಾಗಿದೆ.
ಈ ಹುಡುಗ ಕಳೆದ 6 ತಿಂಗಳ ಹಿಂದೆ ಉಡುಪಿ ನಗರದಲ್ಲಿ ಸುತ್ತಾಡುತ್ತಿದ್ದು ದಿಕ್ಕು ತೋಚದಂತಾಗಿತ್ತು.ಮಾನಸಿಕ ಅಸ್ವಸ್ಥನಂತೆ ಬಾಲಕ ಕಂಡು ಬಂದಿದ್ದು, ಈತ ಯಾರೊಂದಿಗೂ ಬೆರೆಯುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ.ಈ ವೇಳೆ ದೀಪಕ್ (19)ನನ್ನು ಸಮಾಜಸೇವಕ ವಿಶು ಶೆಟ್ಟಿ ರಕ್ಷಿಸಿ ಉಪ್ಪೂರಿನ ವಿಶೇಷ ಮಕ್ಕಳ ಪುನರ್ವಸತಿಕೇಂದ್ರ ಸ್ಪಂದನಾಕ್ಕೆ ಸೇರಿಸಿದ್ದರು.
ಈ ಬಾಲಕ ಕಾಣೆಯಾಗಿರುವುದನ್ನು ಗಮನಿಸಿ ಅತ್ತ ಓಡಿಶಾ ರಾಜ್ಯದ ಪಟ್ನಾಘಡ್ನ ನಿವಾಸಿ ಜೋಗೇಂದ್ರ ಮೆಹರ್ ಅವರು ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು.ಈ ಸಂದರ್ಭದಲ್ಲಿ ಇತ್ತೀಚೆಗೆ ಗ್ರೇಟ್ ಇಂಡಿಯನ್ ಎಎಸ್ಎಂಆರ್ ಎಂ ಯೂಟ್ಯೂಬ್ ಚಾನಲ್ ನವರು ಸ್ಪಂದನಾಕ್ಕೆ ಬಂದು ಅಲ್ಲಿನವರಿಗೆ ಭೋಜನ ನೀಡಿ ಚಿತ್ರೀಕರಿಸಿ ಯೂಟ್ಯೂಬ್ಗೆ ಅಪ್ ಲೋಡ್ ಮಾಡಿದ್ದರು.
ಇದಾದ ಬಳಿಕ ಕೆಲ ದಿನಗಳು ಕಳೆದವು.ಒಂದು ದಿನ ಒಡಿಶಾದಲ್ಲಿ ಮೆಹರ್ ಅವರ ಕುಟುಂಬದ ಸ್ನೇಹಿತರೊಬ್ಬರು ಹೀಗೆ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಅದರಲ್ಲಿದ್ದ ದೀಪಕ್ನ ಗುರುತು ಕಂಡು ಹಿಡಿದರು.ತಕ್ಷಣ ಅವರು ಮೆಹರ್ಗೆ ಮಾಹಿತಿ ನೀಡಿದ್ದಾರೆ. ಅವರು ಒಂಚೂರು ಕಾಯದೇ ಅಲ್ಲಿನ ಪಟ್ನಾಘಡ್ ಎಎಸ್ಐ ಅಜಿತ್ ಮೋಹನ್ ಸೇಟಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದಾರೆ.
ಬಳಿಕ ಸ್ಪಂದನಾದ ಮುಖ್ಯಸ್ಥ ಜನಾರ್ದನ ಮತ್ತು ವಿಶು ಶೆಟ್ಟಿ ಅವರನ್ನು ಭೇಟಿಯಾಗಿ ಮಗನ ಬಗ್ಗೆ ವಿಚಾರಿಸಿದ್ದಾರೆ.೬ ತಿಂಗಳಿಂದ ಹುಡುಕುತ್ತಿದ್ದ ತಂದೆಗೆ ಮಗನನ್ನು ಕಂಡ ಸಂತೋಷಕ್ಕೆ ಪಾರವೇ ಇರಲಿಲ್ಲ.ಮಗನಿಗೂ ಅಪ್ಪನ ಕಂಡು ಸಂತೋಷವೋ ಸಂತೋಷ.ಇವರಿಬ್ಬರ ಭೇಟಿ ಎಲ್ಲರ ಕಣ್ಣುಗಳನ್ನು ಒದ್ದೆಯಾಗಿಸಿದವು.
ಬಳಿಕ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಬಾಲಕನನ್ನು ತಂದೆಯ ವಶಕ್ಕೆ ಒಪ್ಪಿಸಲಾಯಿತು. ಬಾಲಕನನ್ನು ಹೆತ್ತವರಿಗೆ ಒಪ್ಪಿಸಿದ ವಿಶು ಶೆಟ್ಟಿ, ಜನಾರ್ದನ ಅವರು ತಂದೆ -ಮಗನನ್ನು ಒಂದು ಮಾಡಿದ ಯೂಟ್ಯೂಬರ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.
ಈ ಘಟನೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ.ಆ ಒಡಿಶಾ ಯೂಟ್ಯೂಬರ್ಸ್ ಶೂಟಿಂಗ್ ಮಾಡುವ ಸಲುವಾಗಿ ಉಡುಪಿಗೆ ತಂದೆ-ಮಗನನ್ನು ಒಂದು ಮಾಡಲೆಂದು ದೇವರೇ ಕಳಿಸಿರಬೇಕೆಂದು ಭಾಸವಾಗುತ್ತೆ.ಒಡಿಶಾದ ವ್ಯಕ್ತಿಯೊಬ್ಬರು ವಿಡಿಯೋ ನೋಡಿ ಬಾಲಕನ ತಂದೆಗೆ ವಿಷಯ ತಲುಪಿಸಿದ ಈ ಘಟನೆ ನೆನೆಸಿಕೊಂಡಾಗ ಕಡೆಗೂ ಭಗವಂತ ತಂದೆ-ಮಗನನ್ನು ಒಂದು ಮಾಡಿಸಿದನಲ್ವ ಎನ್ನುವ ಭಾವನೆ ಮೂಡುತ್ತೆ.