ನ್ಯೂಸ್ ನಾಟೌಟ್ : ಉಡುಪಿಯ ಖಾಸಗಿ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ. ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಉಡುಪಿ ನಗರದ ಅಂಬಲಪಾಡಿ ಬೈಪಾಸ್ ಬಳಿ ಇರುವ ನೇತ್ರ ಜ್ಯೋತಿ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ತಮ್ಮ ಕೋಮಿನ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ವಿಡಿಯೋವನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ಬಳಿಕ ಕಾಲೇಜಿನಲ್ಲಿ ದೊಡ್ಡ ಗಲಾಟೆ ನಡೆದಿದೆ.
ಕಾಲೇಜಿನಲ್ಲಿ ವಿಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರ ಜೊತೆ ಇತರೆ ವಿದ್ಯಾರ್ಥಿನಿಯರು ವಾಗ್ವಾದ ಮಾಡಿದ್ದು, ಬಳಿಕ ಮಧ್ಯೆ ಪ್ರವೇಶ ಮಾಡಿದ ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿದೆ. ವಿಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಘಟನೆ ತಿಳಿಯುತ್ತಿದ್ದಂತೆ ಕಾಲೇಜಿಗೆ ತೆರಳಿದ್ದ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.
ಪ್ಯಾರಾ ಮೆಡಿಕಲ್ ಡಿಪ್ಲೊಮಾ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಶಬನಾಜ್, ಆಲ್ಫಿಯಾ ಮತ್ತು ಅಲಿಮಾತುಲ್ ಶಾಫಿಯಾ ಸಹಪಾಠಿ ವಿದ್ಯಾರ್ಥಿನಿ ವಾಶ್ ರೂಂನಲ್ಲಿರುವಾಗ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಕಾಲೇಜಿನ ಕಚೇರಿಗೆ ದೂರು ನೀಡಿದ್ದು, ನಂತರ ಕಚೇರಿ ಮುಖ್ಯಸ್ಥರು ವಿಡಿಯೋ ಮಾಡಿದ್ದ ವಿದ್ಯಾರ್ಥಿನಿಯರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮಲ್ಪೆ ಠಾಣಾ ಪೊಲೀಸರು ವಿದ್ಯಾರ್ಥಿನಿಯರ ಮೂರು ಮೊಬೈಲ್ನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ. ಇನ್ನು ಸಂತ್ರಸ್ತ ವಿದ್ಯಾರ್ಥಿನಿ ಮಾನಹಾನಿಯಾಗುವ ಭಯದಿಂದ ಸಹಪಾಠಿ ವಿದ್ಯಾರ್ಥಿನಿಯರ ಮೇಲೆ ದೂರು ನೀಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.