ನ್ಯೂಸ್ ನಾಟೌಟ್: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಮಾರಾಧಾರ ನದಿ ಉಕ್ಕಿ ಹರಿಯುತ್ತಿದೆ. ಅಲ್ಲದೆ ಹಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿದೆ.
ಸೋಮವಾರ ಮುಂಜಾನೆಯಿಂದ ಪಂಜದಿಂದ ಕಡಬ ಸಂಪರ್ಕಿಸುವ ರಸ್ತೆ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯ ನೀರು ರಸ್ತೆಯನ್ನು ಆವರಿಸಿದೆ. ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ ಸುಬ್ರಹ್ಮಣ್ಯ ಹೋಗುವ ವಾಹನ ಸವಾರರು ಪರ್ಯಾಯ ಮಾರ್ಗವಾಗಿ ನಿಂತಿಕಲ್ಲು, ಎಡಮಂಗಲ ಮೂಲಕ ಸಂಚರಿಸಬೇಕಾಗಿದೆ. ಪ್ರತಿ ವರ್ಷ ರಸ್ತೆ ಮುಳುಗುತ್ತಿದ್ದರೂ ಇಲಾಖೆ ಮಾತ್ರ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.