ನ್ಯೂಸ್ ನಾಟೌಟ್ : ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸಮಾಜ ಸುಧಾಕರ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಸಮಾರಂಭ ಭಾನುವಾರ (ಜುಲೈ 23 ) ಅರಂತೋಡು ತೆಕ್ಕಿಲ್ ಸಮುದಾಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಸರ್ಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರಕೋವಿಲ್, ಭಾಷೆ ಮತ್ತು ಸಂಸ್ಕಾರ ಪ್ರತಿಯೊಂದು ರಾಜ್ಯದ ಪ್ರತೀಕ. ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಮಹತ್ವದ ಸಾಂಸ್ಕೃತಿಕ ಕೊಡುಗೆಗಳ ಸ್ಮರಣೆ ಮೆಚ್ಚುವಂಥದ್ದು. ಓರ್ವ ಸಾಧಕ ನಮ್ಮನಗಲಿ ವರ್ಷ ಕಳೆದರೂ ಅವರು ಮಾಡಿದ ಸಾಧನೆಗಳು ಎಂದಿಗೂ ಶಾಶ್ವತವಾಗಿರುತ್ತದೆ. ಜನರು ಅವರ ನೆನಪುಗಳನ್ನು ಸ್ಪರಣಿಸುವುದು ಶ್ಲಾಘನೀಯ. ಎಲ್ಲರೂ ಜಾತಿ- ಧರ್ಮ ನೋಡದೆ ಒಟ್ಟಾಗಿ ಪರಸ್ಪರ ಅರಿತು ಬಾಳಬೇಕು ಎಂದರು. ಬಳಿಕ ಸಚಿವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ತೆಕ್ಕಿಲ್ ಮೊಹಮ್ಮದ್ ಹಾಜಿಯವರು ಸಮಾಜಕ್ಕೆ ಹಲವಾರು ರೀತಿಯ ಕೊಡುಗೆ ನೀಡಿದ್ದಾರೆ. ಈ ಕಾರ್ಯವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮುನ್ನಡೆಸುತ್ತಿರುವುದು ಹೆಮ್ಮೆಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಶಾಸಕಿಯನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಾಯಿತು.
ತೆಕ್ಕಿಲ್ ಪ್ರತಿಷ್ಠಾನದ ಸಂಸ್ಥಾಪಕ ಟಿ.ಎಂ. ಶಹೀದ್ ಮಾತನಾಡಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆಯಿಂದ ಜೀವಿಸಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿ ಬದುಕಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ಆರ್. ಗಂಗಾಧರ ರಾವ್ ಮಾತನಾಡಿ, ಮೊಹಮ್ಮದ್ ಹಾಜಿಯವರು ಶಿಕ್ಷಣ ಸಂಸ್ಥೆ, ಮಸೀದಿ, ಕೃಷಿ ಕ್ಷೇತ್ರಕ್ಕೆ ನೆರವಾಗಿದ್ದಲ್ಲದೆ, ಧರ್ಮ, ಜಾತಿ ನೋಡದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಹಲವಾರು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂದರು.
ಕರ್ನಾಟಕ ವಿಧಾನ ಸಭೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನಿಸಲು ನಿರ್ಧರಿಸಲಾಗಿತ್ತು. ಆದರೆ ಖಾದರ್ ಅವರು ತುರ್ತು ಕಾರ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಗೈರಾಗಿದ್ದರಿಂದ ಯು.ಟಿ. ಖಾದರ್ ಅಭಿಮಾನಿಗಳು ನಿರಾಶೆಗೊಂಡಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮತ್ತೊಂದು ಬಾರಿ ಆಯೋಜಿಸಲಾಗುವುದು ಎಂದು ತೆಕ್ಕಿಲ್ ಪ್ರತಿಷ್ಠಾನದ ಸಂಸ್ಥಾಪಕ ಟಿ.ಎಂ. ಶಹೀದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಐಎನ್ಎಲ್ ಕೇರಳ ಸ್ಟೇಟ್ ಸೆಕ್ರಟರಿ ಸಮ್ಮದ್ ನೆರಿಪತ್ತ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಮ್ ಭಟ್, ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ, ಸುಳ್ಯ ತಹಶೀಲ್ದಾರ್ ಮಂಜುನಾಥ್, ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಸಂಪಾಜೆ ಧರ್ಮಗುರು ಪೌಲ್ ಕ್ರಾಸ್ತಾ, ದಕ್ಷಿಣ ಕನ್ನಡ ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ , ಸಂತೋಷ್ ಕುತ್ತಮೊಟ್ಟೆ , ದಾಮೋದರ ಮಾಸ್ತರ್, ಕೆ. ಟಿ. ವಿಶ್ವನಾಥ್, ಸದಾನಂದ ಮಾವಾಜಿ, ಉಮ್ಮರ್, ಇಬ್ರಾಹಿಂ ಚೊಕ್ಕಾಡಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಖಾಲಿದ್ ತೆಕ್ಕಿಲ್, ಉನೈಸ್ ಪೆರಾಜೆ , ಶಮೀರ್ ತೆಕ್ಕಿಲ್ , ಶಾಝ್ ತೆಕ್ಕಿಲ್ , ಜಾವೇದ್ ತೆಕ್ಕಿಲ್ ಮೊದಲಾದವರು ಉಪಸ್ಥತರಿದ್ದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.