ನ್ಯೂಸ್ ನಾಟೌಟ್: ತನ್ನ ಪ್ರೀತಿಗಾಗಿ ಯುವತಿಯೊಬ್ಬಳು ಮಾಡಿದ ಸಾಹಸ ಗ್ರಾಮಸ್ಥರಿಗೆ ತಲೆನೋವಾಗಿತ್ತು. ಯುವತಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಳು. ಇಂಥದೊಂದು ವಿಲಕ್ಷಣ ಘಟನೆ ನಡೆದದ್ದು ಬಿಹಾರದಲ್ಲಿ.
ಪ್ರೀತಿ ಎಂಬ ಯುವತಿಯೋರ್ವಳು ತನ್ನ ಪ್ರಿಯಕರ ರಾಜ್ಕುಮಾರ್ ಎಂಬಾತನನ್ನು ಭೇಟಿಯಾಗಲು ಪ್ರತಿ ಬಾರಿಯೂ ಇದೇ ರೀತಿ ಮಾಡುತ್ತಿದ್ದಳು. ರಾಜ್ಕುಮಾರ್ ಪ್ರೀತಿ ಕುಮಾರಿ ಜತೆಗಿನ ಸಂಬಂಧ ಕಳೆದ ಒಂದು ವಾರದಿಂದ ಪಶ್ಚಿಮ ಚಂಪಾರಣ್ನ ಎರಡು ಗ್ರಾಮಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು.
ಪದೇ ಪದೆ ವಿದ್ಯುತ್ ಕಡಿತದಿಂದ ಕಂಗಾಲಾಗಿದ್ದ ಗ್ರಾಮಸ್ಥರು ವಾಸ್ತವ ಏನೆಂಬುದನ್ನು ತಿಳಿದಿರಲಿಲ್ಲ. ಆದರೆ ಒಂದು ದಿನ ಈ ಜೋಡಿಗಳ ಗ್ರಹಚಾರ ಕೆಟ್ಟಿತ್ತು. ಪ್ರೀತಿ ಪ್ರತಿ ದಿನ ತನ್ನ ಪ್ರಿಯಕರನನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಳು. ಇದೇ ಸಂದರ್ಭದಲ್ಲಿ ಹಲವು ಕಳ್ಳತನಗಳು ನಡೆದಿರುವ ಘಟನೆಯೂ ವರದಿಯಾಗಿದ್ದವು.
ಈ ಕಾರಣಗಳನ್ನು ತಿಳಿಯಲು ಗ್ರಾಮಸ್ಥರು ನಿರ್ಧರಿಸಿ ಒಂದು ಸಲ ವಿದ್ಯುತ್ ಕಡಿತಗೊಂಡಾಗ ಗ್ರಾಮಸ್ಥರು ಕಾದು ಕುಳಿತಿದ್ದರು. ಆಗ ಈ ಕಿಲಾಡಿ ಜೋಡಿಗಳ ಕೃತ್ಯ ಬಯಲಾಗಿದೆ. ಜೋಡಿಗಳು ವಿದ್ಯುತ್ ಕಡಿತಗೊಳಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಗ್ರಾಮಸ್ಥರು ಯುವಕನಿಗೆ ಥಳಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ತಾನು ಆ ವಿದ್ಯುತ್ ಕಡಿತ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ರಾಜ್ಕುಮಾರ್ ನನ್ನು ಆ ಊರವರ ಗುಂಪಿನಿಂದ ಕಾಪಾಡಿದ್ದಾಳೆ. ನಂತರ ಎರಡು ಗ್ರಾಮಗಳ ಜನರು ಮುತುವರ್ಜಿ ವಹಿಸಿ ರಾಜ್ಕುಮಾರ್ಗೆ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾಗುವಂತೆ ಸೂಚಿಸಿದ್ದಾರೆ. ಕೊನೆಗೆ ಅವರ ಮದುವೆ ಅಲ್ಲಿಯೇ ಹತ್ತಿರದ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು ಎಂದು ವರದಿ ತಿಳಿಸಿದೆ.