ನ್ಯೂಸ್ ನಾಟೌಟ್: ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಬಂಟ್ವಾಳ ತಾಲೂಕಿನ ಕೆದಿಲ ಕಾಂತುಕೋಡಿ ಮುಳುಗು ಸೇತುವೆಯ ಮಧ್ಯೆ ಭಾನುವಾರ ಪಿಕಪ್ ವಾಹನವೊಂದು ಸಿಲುಕಿದ ಘಟನೆ ನಡೆದಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಆದರೆ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕರೋರ್ವ ತಮ್ಮ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದರು. ಆದರೆ ಸೇತುವೆಯ ಮಧ್ಯೆ ತಲುಪಿದಾಗ ನೀರು ಹೆಚ್ಚಾಗಿ ವಾಹನದ ಇಂಜಿನ್ ಬಂದ್ ಆಗಿ ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ಸ್ಥಳೀಯರು ಮತ್ತು ಇತರ ವಾಹನದಲ್ಲಿದ್ದವರು ಪಿಕಪ್ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.
ಪ್ರತೀ ವರ್ಷ ಮಳೆ ಬಂದಾಗ ಈ ಸೇತುವೆ ಮುಳುಗಡೆಯಾಗುತ್ತದೆ. ನಿರಂತರ ಮಳೆ ಸುರಿದು ಸೇತುವೆ ಮುಳುಗಡೆಯಾದರೆ ವಾಹನ ಚಾಲಕರು ಅಪಾಯದಲ್ಲೇ ವಾಹನ ಚಲಾಯಿಸಬೇಕಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶಾಶ್ವತ ಕ್ರಮಕೈಗೊಳ್ಳುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.