ನ್ಯೂಸ್ ನಾಟೌಟ್: ಹಲವು ಕಡೆ ಕುತ್ತಾರಿನ ಕೊರಗಜ್ಜನ ಆದಿಸ್ಥಳ ಎಂದು ಜನರಿಗೆ ಹೇಳಲಾಗುತ್ತದೆ. ಆದರೆ ತುಳುನಾಡಿನಲ್ಲಿ ಕೊರಗಜ್ಜ ಕ್ಷೇತ್ರಗಳು ಹೆಚ್ಚಿನ ಕಡೆಯಲ್ಲಿವೆ. ಆದರೆ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಸ್ಥಳಗಳಿರುವುದು ಏಳು ಕಡೆಗಲಲ್ಲಿ ಮಾತ್ರ ಎಂದು ಕುತ್ತಾರು ಶ್ರೀಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನ ಮತ್ತು ಕೊರಗತನಿಯ ದೈವದ ಆದಿಸ್ಥಳಗಳ ಆಡಳಿತ ಮಂಡಳಿಯು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಏಳು ಆದಿಸ್ಥಳಗಳು ದಿನದ 24 ಗಂಟೆಯೂ ತೆರೆದಿದ್ದರೂ ಮಹಿಳೆಯರಿಗೆ ಮಾತ್ರ ಬೆಳಗ್ಗೆ 6.30ರಿಂದ ಸಂಜೆ 6.30ರವರೆಗೆ ಮಾತ್ರ ಪ್ರವೇಶ ಇರುತ್ತದೆ. ವಿಶೇಷವೆಂದರೆ, ಈ ಏಳು ಆದಿ ಸ್ಥಳಗಳಲ್ಲಿ ಕೊರಗಜ್ಜನ ಕೋಲಗಳು ಕತ್ತಲೆಯಲ್ಲಿಯೇ ನಡೆಯುತ್ತದೆ. ಕೊರಗಜ್ಜನ ಏಳು ಆದಿ ಸ್ಥಳಗಳಲ್ಲಿ ಯಾವುದೇ ದೀಪ ಧೂಪ ಅಗರಬತ್ತಿಗಳನ್ನು ಹಚ್ಚುವಂತಿಲ್ಲ. ಕಾರಣ, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಭಕ್ತರು ಯಾವುದೇ ದಿನ ಎಷ್ಟು ಹೊತ್ತಿಗೆ ಬೇಕಾದರೂ ಆದಿಸ್ಥಳಕ್ಕೆ ಭೇಟಿ ನೀಡಿ ಕೊರಗಜ್ಜನೊಂದಿಗೆ ನಿವೇದನೆ ಮಾಡಿಕೊಳ್ಳಬಹುದು. ಕಚೇರಿಗೆ ಭೇಟಿ ನೀಡಿ ಕೊರಗಜ್ಜನ ಆದಿಸ್ಥಳದಲ್ಲಿ ಮಾಡಲಾಗುವ ಸೇವಾ ವಿವರಗಳನ್ನು ಪಡೆದುಕೊಳ್ಳಬಹುದು.
ತಲೆ- ತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಕುತ್ತಾರಿನಲ್ಲಿರುವ ಕೊರಗತನಿಯ ದೈವ ನೆಲೆ ನಿಂತ ಸ್ಥಳವನ್ನು ಆದಿಸ್ಥಳ ಎಂದು ಗುರುತಿಸಲಾಗಿದೆ. ಪಾಡ್ದನಗಳ ಉಲ್ಲೇದಂತೆ ಅರಸು ದೈವಗಳನ್ನು ಹಿಮ್ಮೆಟ್ಟಿಸಿದ್ದಕ್ಕೆ ಪ್ರತಿಯಾಗಿ ಪಂಜಂದಾಯ ದೈವವು ಕೊರಗತನಿಯ ದೈವಕ್ಕೆ ಏಳು ಕಲ್ಲು, ಏಳು ವರ್ಗ ತುಂಡು ಗ್ರಾಮಗಳನ್ನು ನೀಡಿರುತ್ತದೆ. ಇದೇ ಈಗ ಕೊರಗತನಿಯ ದೈವದ ಆದಿಸ್ಥಳಗಳಾಗಿವೆ ಎನ್ನಲಾಗಿದೆ.
ಅವುಗಳೆಂದರೆ ಕುತ್ತಾರು ಆದಿಸ್ಥಳ, ಸೋಮೇಶ್ವರ ಆದಿಸ್ಥಳ, ಬೊಲ್ಯ ಆದಿಸ್ಥಳ, ಮಿತ್ತ ಅಗೆಲ ಆದಿಸ್ಥಳ, ಉಜಿಲ ಆದಿಸ್ಥಳ, ತಲ ಆದಿಸ್ಥಳ, ದೇರಳಕಟ್ಟೆ ಆದಿಸ್ಥಳ ಎಂಬ ಉಲ್ಲೇಖಗಳಿವೆ. ಆದಿಸ್ಥಳಗಳು ವರ್ಷದ ಎಲ್ಲ ದಿನವೂ, ದಿನದ 24 ಗಂಟೆಯೂ ತೆರೆದಿರುತ್ತದೆ ಎಂದು ವರದಿ ತಿಳಿಸಿದೆ.