ನವದೆಹಲಿ: ಅತ್ತೆ ಕಾನೂನು ಪ್ರಕಾರ ಅಳಿಯನ ಉತ್ತರಾಧಿಕಾರಿ ಆಗದೇ ಇರಬಹುದು. ಆದರೆ, ಮೋಟಾರು ವಾಹನ ಕಾಯ್ದೆಯಡಿ ಪರಿಹಾರವನ್ನು ಪಡೆಯಲು ಅವರನ್ನು ಕಾನೂನು ಪ್ರತಿನಿಧಿಯಾಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
‘ಅತ್ತೆಯು ತನ್ನ ವೃದ್ದಾಪ್ಯದಲ್ಲಿ ಅಳಿಯ ಮತ್ತು ಮಗಳೊಂದಿಗೆ ವಾಸಿಸುವುದು, ಅವರ ಮೇಲೆ ಅವಲಂಬನೆ ಆಗುವುದು ಸಾಮಾನ್ಯ ಸಂಗತಿ. ಅಳಿಯನ ಸಾವಿನಿಂದ ಆಕೆಗೂ ತೊಂದರೆಯಾಗಬಹುದು. ಹಾಗಾಗಿ ಮೋಟಾರು ವಾಹನ ಕಾಯ್ದೆಯ 166ನೇ ಸೆಕ್ಷನ್ ಪ್ರಕಾರ ಪರಿಹಾರವನ್ನು ಪಡೆಯಲು ಅತ್ತೆಯನ್ನು ಕಾನೂನು ಪ್ರತಿನಿಧಿಯಾಗಿ ಪರಿಗಣಿಸಬಹುದು’ ಎಂದು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣಾ ಮುರಾರಿ ಅವರ ಪೀಠವು ಹೇಳಿತು.