ನ್ಯೂಸ್ ನಾಟೌಟ್ : ಸರ್ಕಾರಿ ಶಾಲೆಗಳ ಬಗ್ಗೆ ಇಲಾಖೆ ನಿರ್ಲಕ್ಷ್ಯ ಮತ್ತು ಶಿಕ್ಷಕರು ಹಾಗೂ ಮೂಲ ಸೌಲಭ್ಯಗಳ ಕೊರತೆಯ ನಡುವೆ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಈ ನಿಟ್ಟಿನಲ್ಲಿ ಶಾಲೆಯ ಉಳಿವಿಗಾಗಿ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಕರಿಕೆ ಗ್ರಾಮ ಪಂಚಾಯತ್ ಮತ್ತು ಇಲ್ಲಿನ ಪ್ರೌಢಶಾಲೆ ವತಿಯಿಂದ ಶುಕ್ರವಾರ (ಜುಲೈ 21) ಶಿಕ್ಷಣ ಇಲಾಖೆಗೆ ಸಲ್ಲಿಸಲಾಯಿತು.
ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೇ ವರದಾನವಾಗಿದೆ. ಆದರೆ ಕೊಡಗು ಮತ್ತು ಕೇರಳದ ಗಡಿ ಭಾಗದಲ್ಲಿರುವ ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಶಾಲೆಗೆ ಶಿಕ್ಷಕರ ಕೊರತೆ ಎದುರಾಗಿದೆ. ಇದರಿಂದ ಇಲ್ಲಿನ ಬಡ ಮಕ್ಕಳು ಪಕ್ಕದ ಮಲೆಯಾಳ ಶಾಲೆಗೆ ಸೇರುವ ಅನಿವಾರ್ಯತೆ ಎದುರಾಗಿದೆ. ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ.75 ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಾಗಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾದ್ಯಾಯರು, ಹಿಂದಿ, ಕನ್ನಡ, ಗಣಿತ, ದೈಹಿಕ ಶಿಕ್ಷಣ ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಅಲ್ಲದೆ ಅನಿವಾರ್ಯವಾಗಿ ಪಕ್ಕದಲ್ಲಿರುವ ಕೇರಳ ರಾಜ್ಯದ ಮಲೆಯಾಳ ಶಾಲೆಯಲ್ಲಿ ದಾಖಲಾಗುವ ಆತಂಕ ಎದುರಾಗಿದೆ.
ಈ ಬಗ್ಗೆ ಮಡಿಕೇರಿಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿರುವ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಹಾಗೂ ಸರ್ಕಾರಿ ಪ್ರೌಢಶಾಲೆಯ ಅಧ್ಯಕ್ಷ ಕೆ.ಆರ್.ಜನಾರ್ದನ, ಖಾಯಂ ಶಿಕ್ಷಕರನ್ನು ನೇಮಿಸಿ ಗಡಿಭಾಗದ ಶಾಲೆಯನ್ನು ಉಳಿಸಿ ಎಂದು ಒತ್ತಾಯಿಸಿದರು. ಖಾಯಂ ಶಿಕ್ಷಕರನ್ನು ನೇಮಕ ಮಾಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದರು.