ನ್ಯೂಸ್ ನಾಟೌಟ್ : ಧರ್ಮಸ್ಥಳ ಸಮೀಪ ಭೀಕರ ಅತ್ಯಾಚಾರ ಹಾಗೂ ಕೊಲೆಗೀಡಾದ ಸೌಜನ್ಯ ಪ್ರಕರಣ 11 ವರ್ಷಗಳ ಬಳಿಕ ಭಾರಿ ಸದ್ದಾಗುತ್ತಿದೆ. ಈ ಘಟನೆಯನ್ನು ಆಧರಿಸಿ ಸಿನಿಮಾ ಮಾಡೋಕೆ ಸ್ಯಾಂಡಲ್ವುಡ್ನಲ್ಲಿ (Sandalwood News) ತಯಾರಿ ಆಗುತ್ತಿದೆ ಅನ್ನುವ ಮಾಹಿತಿ ಹೊರಬಿದ್ದಿರುವ ಬೆನ್ನಲ್ಲೇ ಆ ಸಿನಿಮಾವನ್ನುಮಾಡುವುದಕ್ಕೆ ಸೌಜನ್ಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಸೌಜನ್ಯ ಮಾವ ವಿಠಲ ಗೌಡ, ನಮ್ಮ ಒಪ್ಪಿಗೆ ಇಲ್ಲದೆ ಆ ಸಿನಿಮಾವನ್ನು ಹೇಗೆ ಮಾಡುತ್ತಾರೆ. ನಮ್ಮನ್ನು ದಾರಿ ತಪ್ಪಿಸುವುದಕ್ಕೆ ಸಿನಿಮಾ ಮಾಡಲಾಗುತ್ತದೆಯೇ..? ಕಥೆ ಏನು ಮಾಡಿದ್ದಾರೆ ಅನ್ನುವುದೇ ನಮಗೆ ಗೊತ್ತಿಲ್ಲ. ನಮ್ಮ ಉದ್ದೇಶ ಸಿನಿಮಾ ಮಾಡುವುದು ಅಲ್ಲ. ನಮಗೆ ನ್ಯಾಯ ಸಿಗಬೇಕು, ರಾಜ್ಯದ ಕೆಲವು ಮಾಧ್ಯಮಗಳು ಬೇಕೆಂದೇ ಇದನ್ನು ದೊಡ್ಡದಾಗಿ ತೋರಿಸುತ್ತಿವೆ. ಉದ್ದೇಶ ಗೊತ್ತಾಗುತ್ತಿಲ್ಲ, ಯಾರಾದರೂ ಸಿನಿಮಾ ಮಾಡುವುದಕ್ಕೆ ಮುಂದಾದರೆ ಹೈಕೋರ್ಟ್ ನಿಂದ ಅದಕ್ಕೆ ತಡೆಯಾಜ್ಞೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು.11 ವರ್ಷ ಕಳೆದರೂ ಇನ್ನು ಸೌಜನ್ಯ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ಆಕೆ ಮನೆಯವರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.ಇದರ ಬೆನ್ನಲ್ಲೇ ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ವಿಚಾರ ಇದೀಗ ಸಾಕಷ್ಟು ಕುತೂಹಲ ಮೂಡಿಸಿತ್ತು.
ಸೌಜನ್ಯ ಅವರ ಜೀವನ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ನಡೆದಿದ್ದು 2012ರ ಅಕ್ಟೋಬರ್ 09ರಂದು. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ ಅತ್ಯಾಚಾರ ಹಾಗೂ ಕೊಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಯಿತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಮಣ್ಣಸಂಖದಲ್ಲಿ ಅವರ ಶವ ಪತ್ತೆ ಆಯಿತು.
ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಆದರೆ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು?ಸೌಜನ್ಯಳನ್ನು ಅಪಹರಿಸಿ ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆಎದ್ದಿದೆ.ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಸರಿಯಾದ ಶಿಕ್ಷೆ ನೀಡಿ ಎನ್ನುವ ಬಗ್ಗೆ ಅಲ್ಲಲ್ಲಿ ಪ್ರತಿಭಟನೆಗಳು ನಡಿತಿವೆ.