ನ್ಯೂಸ್ ನಾಟೌಟ್: ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಕಟ್ಟಡದ ೪ನೇ ಅಂತಸ್ತಿನಿಂದ ಕೂಲಿ ಕಾರ್ಮಿಕನೊಬ್ಬ ಕೆಳಗೆ ಬಿದ್ದು ಕೈ, ಕಾಲು ಮುರಿದುಕೊಂಡಿದ್ದಾನೆ. ಈತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಬಿಹಾರ ಮೂಲದ ಶಾಹಿದ್ (25) ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕ. ಅಬ್ಬಕ್ಕ ಸರ್ಕಲ್ ನಲ್ಲಿದ್ದ ಶಿಥಿಲಗೊಂಡಿದ್ದ ಕಟ್ಟಡವನ್ನ MLC ಫಾರೂಕ್ ಖರೀದಿಸಿದ್ದು ಶಿಥಿಲ ಕಟ್ಟಡಕ್ಕೆ ಮಹಡಿಗಳನ್ನ ಹಾಕಲು ಮುಂದಾಗಿದ್ದರು. ಕಟ್ಟಡಕ್ಕೆ ಒಂದಡಿ ಪಾರ್ಕಿಂಗ್ ವ್ಯವಸ್ಥೆಯಾಗಲೀ, ಸೆಟ್ ಬ್ಯಾಕ್ ಆಗಲಿ ಇಲ್ಲ. ಸಾರ್ವಜನಿಕರ ದೂರಿನ ಮೇರೆಗೆ ಹಿಂದಿನ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಕಟ್ಟಡ ಕಾಮಗಾರಿಯನ್ನ ತಡೆದಿದ್ದರು. ಆದರೆ ಫಾರೂಕ್ ತನ್ನೆಲ್ಲ ಪವರ್ ಬಳಸಿ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ. ನಿಯಮ ಮೀರಿ ಕಟ್ಟುತ್ತಿರುವ ಕಟ್ಟಡದ ಕಾಮಗಾರಿಯಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸದೇ ದುಡಿಮೆಯಲ್ಲಿ ತೊಡಗಿದ್ದ ಕಾರ್ಮಿಕ ಶಾಹಿದ್ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ.