ನ್ಯೂಸ್ ನಾಟೌಟ್ : ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ ಸಮೀಪ ಭೀಕರ ಅತ್ಯಾಚಾರ ಹಾಗೂ ಕೊಲೆಗೀಡಾದ ಪಾಂಗಳದ ಹುಡುಗಿ ಸೌಜನ್ಯ ಪ್ರಕರಣವನ್ನಿಟ್ಟುಕೊಂಡು ನೈಜ ಘಟನೆ ಆಧರಿಸಿ ಸ್ಯಾಂಡಲ್ವುಡ್ನಲ್ಲಿ (Sandalwood News) ಸಿನಿಮಾ ಸಿದ್ಧವಾಗುತ್ತಿದೆ.ಧರ್ಮಸ್ಥಳದ (Dharmasthala) ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು.11 ವರ್ಷ ಕಳೆದರೂ ಇನ್ನು ಸೌಜನ್ಯ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ಆಕೆ ಮನೆಯವರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.ಇದರ ಬೆನ್ನಲ್ಲೇ ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ವಿಚಾರ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಘಟನೆ ನಡೆದಿದ್ದು 2012ರ ಅಕ್ಟೋಬರ್ 09ರಂದು. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ ಅತ್ಯಾಚಾರ ಹಾಗೂ ಕೊಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಯಿತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಮಣ್ಣಸಂಖದಲ್ಲಿ ಅವರ ಶವ ಪತ್ತೆ ಆಯಿತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಆದರೆ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು?ಸೌಜನ್ಯಳನ್ನು ಅಪಹರಿಸಿ ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆಎದ್ದಿದೆ.ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಸರಿಯಾದ ಶಿಕ್ಷೆ ನೀಡಿ ಎನ್ನುವ ಬಗ್ಗೆ ಅಲ್ಲಲ್ಲಿ ಪ್ರತಿಭಟನೆಗಳು ನಡಿತಿವೆ.
ಸೌಜನ್ಯ ಅವರ ಜೀವನ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.