ನ್ಯೂಸ್ ನಾಟೌಟ್: ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವುದಷ್ಟೇ ನಮ್ಮ ಹೋರಾಟ. ಇಂದು ಬಡವರ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ. ನಮ್ಮ ಮನೆಯ ಹೆಣ್ಣು ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗದಿರಲಿ ಎಂದು ಮೃತ ಸೌಜನ್ಯ ಮಾವ ವಿಠಲ್ ಗೌಡ ತಿಳಿಸಿದ್ದಾರೆ.
ಸೌಜನ್ಯ ಹೆಸರಲ್ಲಿ ವಾಟ್ಸಾಪ್ ಗ್ರೂಪ್ ಗಳ ತೆರೆದಿರುವ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ವಿಠಲ್ ಗೌಡ ಅವರು, ಇಂದು ಸಾಮಾಜಿಕ ಜಾಲತಾಣಗಳು ಹೆಚ್ಚು ಬಲಿಷ್ಠವಾಗಿದೆ. ಮಾಡಿದ ಪಾಪದ ಕೃತ್ಯವನ್ನು ಬಚ್ಚಿಡುವ ಪ್ರಯತ್ನಗಳು ಆಗುತ್ತಿದೆ. ಅಂತಹ ಪ್ರಯತ್ನಗಳಿಗೆ ಪ್ರಭಾವಿಗಳ ಬಲವಿದೆ. ಇಂದು ನಮ್ಮ ಮನೆಯ ಹೆಣ್ಣು ಮಗುವಿಗೆ ಆದ ಅನ್ಯಾಯ ಮುಂದೆ ಬೇರೆ ಯಾರಿಗೂ ಆಗಬಾರದು. ಸತ್ಯ ಏನು ಅನ್ನುವುದು ಹೊರಗೆ ಬರಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ವಾಟ್ಸಾಪ್ ಗ್ರೂಪ್ಗಳನ್ನು ತೆರೆದು ಮನೆಮನೆಗೂ ತಲುಪುವಂತೆ ಮಾಡುತ್ತೇವೆ ಎಂದು ವಿಠಲ್ ಗೌಡ ತಿಳಿಸಿದರು.
ಜನರಿಗೆ ಸತ್ಯ ಗೊತ್ತಾಗಬೇಕು. ನ್ಯಾಯ ಮತ್ತು ಸತ್ಯದ ಪರ ನಮ್ಮ ಹೋರಾಟವಾಗಿದೆ. ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಕಾನೂನಿನ ಮುಖಾಂತರ ಹೋರಾಟ ಮುಂದುವರಿಯುತ್ತದೆ. ಸೌಜನ್ಯಳನ್ನು ಅತ್ಯಾಚಾರವೆಸಗಿ ಕೊಂದವರು ಯಾರು ಎನ್ನುವುದು ಗೊತ್ತಾಗಬೇಕು. ಆತನಿಗೆ ಸರಿಯಾದ ಶಿಕ್ಷೆಯಾಗಬೇಕು. ಇದಕ್ಕಾಗಿ ಕಾನತ್ತೂರಿಗೂ ಹೋಗಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ವಿಠಲ್ ಗೌಡ ತಿಳಿಸಿದರು.