ನ್ಯೂಸ್ ನಾಟೌಟ್: ಸುಳ್ಯದ ಗೂಡ್ಸ್ ಟೆಂಪೊ ಚಾಲಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಸಾವಿರಾರು ರೂ. ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜು. 15 ರಂದು ಘಟನೆ ನಡೆದಿದ್ದು ಖದೀಮನ ಮೋಸದ ಬಲೆಗೆ ಸಿಲುಕಿ ಚಾಲಕರು ಸಾವಿರಾರು ರೂ. ಹಣ ಕಳೆದುಕೊಂಡಿದ್ದಾರೆ. ಇದರ ಸಿಸಿಟಿವಿ ದೃಶ್ಯ ನ್ಯೂಸ್ ನಾಟೌಟ್ ಗೆ ಲಭಿಸಿದ್ದು ವೀಕ್ಷಿಸಬಹುದಾಗಿದೆ.
ಸುಳ್ಯದ ಗಾಂಧಿನಗರದಲ್ಲಿರುವ ಗೂಡ್ಸ್ ಟೆಂಪೊ ಪಾರ್ಕಿಂಗ್ ಸ್ಥಳಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿ ತನಗೆ ಮೂರು ಗೂಡ್ಸ್ ಟೆಂಪೊಗಳು ಬಾಡಿಗೆಗೆ ಬೇಕು ಎಂದು ಚಾಲಕರೊಬ್ಬರ ಬಳಿ ಕೇಳಿದ್ದಾನೆ. ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಹೋಗುವುದಕ್ಕೆ ಇದೆ ಎಂದು ನಂಬಿಸಿದ್ದ. ಮೂರು ಟೆಂಪೋಗಳನ್ನು ಇದಕ್ಕಾಗಿ ಗೊತ್ತುಪಡಿಸಿದ್ದ. ನಾನು ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಸಾಗಿಸಬೇಕಾಗಿದೆ. ಮಡಿಕೇರಿಯಿಂದ ಕನಕಪುರ ಹೋಗಿ ಪುನ: ಹಿಂತಿರುಗಿ ಬರುವಾಗ ವಿದ್ಯುತ್ ಟ್ರಾನ್ಸ್ ಫರ್ ಪೆಟ್ಟಿಗೆ ತರಲಿದೆ. ಅದಕ್ಕೆ (407) ಗೂಡ್ಸ್ ಟೆಂಪೊ ಬೇಕು ಎಂದು ಬೆಣ್ಣೆ ಸವರುವ ಮಾತುಗಳನ್ನು ಆಡಿದ್ದ.
ನನ್ನಲ್ಲಿ ಸೆಂಟ್ರಲ್ ಗವರ್ನಮೆಂಟ್ ಕಾರ್ಡ್ ಇದೆ, ಇದರಲ್ಲಿ ಸಬ್ಸಿಡಿಯಲ್ಲಿ ಡೀಸೆಲ್ ಸಿಗುತ್ತದೆ. ನೀವು 1 ಲೀಟರ್ ಡೀಸೆಲ್ ಗೆ ರೂ. 55/- ರಂತೆ ಪಾವತಿಸಿದರಾಯಿತು. ಉಳಿದ ಬಾಡಿಗೆ ಹಣವನ್ನು ನಿಮಗೆ ಅಲ್ಲಿಗೆ ತಲುಪಿದ ಮೇಲೆ ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಅಲ್ಲದೆ ಮೂರು ವಾಹನಗಳಿಗೆ ಡೀಸಲ್ ತುಂಬಿಸುವಂತೆ ಹೇಳಿ ಬಸ್ ನಿಲ್ದಾಣದ ಎದುರಿನ ಪೆಟ್ರೋಲ್ ಬಂಕಿನಲ್ಲಿ ಡೀಸಲ್ ತುಂಬಲು ಆರ್ಡರ್ ಮಾಡುತ್ತಾನೆ.
ಈ ವೇಳೆ ಚಾಲಕರ ಕೈಯಿಂದ ರೂ.55 ರಂತೆ ಮುಂಗಡ ರೂ. 7600 ಸಾವಿರ ಹಣವನ್ನು ಪಡೆದುಕೊಂಡಿರುತ್ತಾನೆ. ಡೀಸೆಲ್ ಹಾಕಿದ ಹಣವನ್ನು ಕಾರ್ಡಿನ ಮುಖಾಂತರ ಪಾವತಿ ಮಾಡುತ್ತೇನೆಂದು ಹೇಳಿ ನನ್ನ ಬಾಸ್ ಮೆಸ್ಕಾಂ ಇಲಾಖೆಯ ಬಳಿ ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಪೇ ಮಾಡ್ತೇನೆ ಎಂದು ಹೇಳಿ ಅಟೋ ರಿಕ್ಷಾದಲ್ಲಿ ತೆರಳುತ್ತಾನೆ. ಮೂರು ವ್ಯಾನ್ ಗಳಿಗೆ ಡೀಸಲ್ ತುಂಬಿಸಿ ಎಂದು ಹೇಳಿ ಅಟೋ ಹತ್ತಿ ಹೋದ ವ್ಯಕ್ತಿಯು ಗಂಟೆ ಒಂದು ಕಳೆದರು ಬರಲಿಲ್ಲ.
ಸುಮಾರು 12600 ಸಾವಿರ ಮೌಲ್ಯದ ಡೀಸಲ್ ಮೂರು ವಾಹನಗಳಿಗೆ ತುಂಬಿಸಿ ಗಂಟೆ ಕಳೆದರೂ ಕಾರ್ಡ್ ತರುವುದಾಗಿ ಹೋದ ವ್ಯಕ್ತಿ ಬಾರದೇ ಇದ್ದಾಗ ಸಂಶಯ ಗೊಂಡ ಚಾಲಕರು ಪುನ: ಹಿಂತಿರುಗಿ ಬಂದು ಅಪರಿಚಿತ ವ್ಯಕ್ತಿಯನ್ನು ಹುಡುಕಾಡುತ್ತಾರೆ. ಎಲ್ಲಾ ಕಡೆಗಳಲ್ಲಿ ಹುಡುಕಿದರೂ ಸಿಗದೇ ಇದ್ದಾಗ ಸಂಶಯಗೊಂಡು ಆತ ಹೋದ ಅಟೋ ಚಾಲಕರಲ್ಲಿ ವಿಚಾರಿಸಿದಾಗ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈತ ಜಾಕೆಟ್ ಹಾಗೂ ಮಾಸ್ಕ್ ಅನ್ನು ಧರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.