ಬೀಜಿಂಗ್ : ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾದ ವಾಯವ್ಯಭಾಗದಲ್ಲಿರುವ ಗನ್ಸು ಪ್ರಾಂತ್ಯದಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಆ ಭಾಗದ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ.
ಪ್ರಾಚೀನ ಸಿಲ್ಕ್ ರೂಟ್ ನಲ್ಲಿರುವ ಗನ್ಸು ಪ್ರಾಂತ್ಯವು ಬೌದ್ಧ ಚಿತ್ರಗಳಿಗೆ ಹೆಸರಾಗಿರುವ ಗುಹೆಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ಖ್ಯಾತಿ ಪಡೆದಿದೆ. ಈ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸ್ಥಳೀಯವಾಗಿ ಪ್ರಸರಣವಾಗಿರುವ 35 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಗನ್ಸು ನಗರಕ್ಕೆ ಸೇರಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಮಂಗೋಲಿಯಾ ವಲಯದ ಒಳಭಾಗದಲ್ಲಿ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಕೆಲವೊಂದು ಪ್ರಾಂತ್ಯಗಳಿಗೆ ಮತ್ತು ನಗರಗಳಿಗೆ ಹರಡಿರುವ ಸಾಧ್ಯತಯೂ ಇದೆ. ಮಂಗೋಲಿಯಾ ಒಳಭಾಗದಲ್ಲಿರುವ ಕೆಲವು ಕಡೆಗಳಲ್ಲಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.