ನ್ಯೂಸ್ ನಾಟೌಟ್ : ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ನೀರಿನ ರಭಸಕ್ಕೆ ವೃದ್ಧೆಯೊಬ್ಬರು ಕೊಚ್ಚಿ ಕೊಂಡು ಹೋಗಿದ್ದು ಪವಾಡ ಸದೃಶವಾಗಿ ಬದುಕುಳಿದ ಘಟನೆ ವರದಿಯಾಗಿದೆ.ಸತತ 13 ಗಂಟೆಗಳ ಕಾಲ ಹರಿಯುತ್ತಿರುವ ನೀರಿನಲ್ಲೇ ಒದ್ದಾಡಿ ಕಡೆಗೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ..!
ಈ ಘಟನೆ ವರದಿಯಾಗಿದ್ದು ಕೇರಳದ ಕೊಚ್ಚಿ ಎಂಬಲ್ಲಿ. ಸಂಜೆ ವೇಳೆಗೆ ಪುನೂರು ನದಿಗೆ ಅನಕ್ಕಯಂ ನಿವಾಸಿಯಾಗಿರುವ ಕಮಲಾಕ್ಷಿ (78) ಅವರು ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ನದಿಯಲ್ಲಿನ ನೀರಿನ ರಭಸಕ್ಕೆ ವೃದ್ಧೆ ಕಮಲಾಕ್ಷಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಛಲ ಬಿಡದೆ ಕಮಲಾಕ್ಷಿ ನೀರಿನ ರಭಸದ ವಿರುದ್ಧವಾಗಿ ಗಿಡಗಳ ಗೆಲ್ಲುಗಳನ್ನು ಹಿಡಿದು ನಿಂತಿದ್ದಾರೆ..!
ನೀರು ಕಮಲಾಕ್ಷಿ ಅವರ ಕತ್ತಿನವರೆಗೆ ಇದ್ದರೂ, ಇದೇ ಸ್ಥಿತಿಯಲ್ಲಿ ಅವರು ರಾತ್ರಿಯನ್ನೂ ಕಳೆದಿದ್ದಾರೆ..!ನೀರಿನಲ್ಲೇ ಜೀವ ಕಾಪಾಡಿಕೊಂಡು ನಿಂತಿದ್ದಾರೆ ಅನ್ನೋದು ಆಶ್ಚರ್ಯದ ಸಂಗತಿ.ನೀರಿನಲ್ಲೇ ಸಿಲುಕಿದ ಪರಿಣಾಮ ವೃದ್ಧೆ ಮಾತನಾಡಲು ಆಗದೇ ಯಾರ ಸಹಾಯವನ್ನು ಕೇಳದ ಸ್ಥಿತಿಗೆ ತಲುಪಿದ್ದರು. ಮರುದಿನ ಬೆಳಗ್ಗೆ ಹೇಗೋ ಮರದ ಕೋಲನ್ನು ಹಿಡಿದುಕೊಂಡು ನದಿಯಲ್ಲಿದ್ದ ಬಂಡೆಯ ಮೇಲೆ ಆಶ್ರಯವನ್ನು ಪಡೆದಿದ್ದಾರೆ.
ಇತ್ತ ವೃದ್ದೆ ನದಿಯಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದು ಅಲ್ಲಿನ ಸ್ಥಳೀಯರು ಹಾಗೂ ನರಿಕ್ಕುಣಿ ಅಗ್ನಿಶಾಮಕ ರಕ್ಷಣಾ ತಂಡದವರು ಅವರನ್ನು ಹುಡುಕಾಡಲು ಶುರು ಮಾಡಿದ್ದಾರೆ.ಹೀಗೆ ಹುಡುಕಾಡುತ್ತಿರುವ ವೇಳೆ ಈ ವೃದ್ದೆ ಬಂಡೆಯನ್ನು ಆಸ್ರಯ ಪಡೆದದಿರುವ ವಿಷಯ ತಿಳಿದು ಬಂತು.ಕೂಡಲೇ ವೃದ್ದೆಯತ್ತ ಧಾವಿಸಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ತಾಮರಸ್ಸೆರಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಕಮಲಾಕ್ಷಿ ಅವರನ್ನು ದಾಖಲು ಮಾಡಿ, ಆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.