ನ್ಯೂಸ್ ನಾಟೌಟ್: ಪ್ರಸ್ತುತ ಆನ್ಲೈನ್ ಶಾಪಿಂಗ್ ಭಾರಿ ಪ್ರಸಿದ್ಧಿ ಪಡೆದಿದೆ. ಆದರೆ ಇತ್ತೀಚೆಗೆ ದಿನಗಳಲ್ಲಿ ಆನ್ಲೈನ್ ಶಾಪಿಂಗ್ನ ಅವಾಂತರಗಳು ಒಂದೊಂದೇ ಬಯಲಾಗುತ್ತಿದೆ. ಗ್ರಾಹಕ ತನಗೆ ಬೇಕಾದ ವಸ್ತುವನ್ನು ಆರ್ಡರ್ ಮಾಡಿದರೆ ಗ್ರಾಹಕನಿಗೆ ತಲುಪುದು ಮಾತ್ರ ಯಾವುದೋ ಬೇರೊಂದು ವಸ್ತು.
ಇಂಥದೊಂದು ಘಟನೆಗೆ ಸಾಕ್ಷಿಯಾಗಿದೆ ಅಮೇಝಾನ್ ಆನ್ಲೈನ್ ಸೇವೆ. ಗ್ರಾಹಕನೋರ್ವ ಅಮೇಝಾನ್ನಿಂದ ರೂ. 90,000 ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದ್ದರು. ಆದರೆ ಬಂದದ್ದು ಮಾತ್ರ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು..! ಇದನ್ನು ಅರುಣಕುಮಾರ್ ಮೆಹೆರ್ ಎಂಬುವವರು ತಮ್ಮ ಅನುಭವವನ್ನು ಟ್ವೀಟ್ ಮಾಡಿದ್ದಾರೆ. ‘ಅಮೇಝಾನ್ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್ ಬಾಕ್ಸಿನೊಳಗೆ ಕಿನೋವಾ ಬೀಜಗಳ (Quinoa Seeds) ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್ ಮತ್ತು ಎಪ್ಪಾರಿಯೋ ರೀಟೇಲ್ನ ದೊಡ್ಡ ಸ್ಕ್ಯಾಮ್ ಇದು ಎಂದು ಆರೋಪಿಸಿದ್ದಾರೆ.
ಅರುಣಕುಮಾರ್ ಜು. 5ರಂದು ಅಮೇಝಾನ್ನಿಂದ ಸಿಗ್ಮಾ 24/70 F 2.8 ಲೆನ್ಸ್ ಆರ್ಡರ್ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ.
ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮ್ಮ ಇಂಥ ಅನುಭವಗಳನ್ನು ಈ ಟ್ವೀಟ್ನಡಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಸಿಗ್ಮಾ 150-600 ಲೆನ್ಸ್ ಆರ್ಡರ್ ಮಾಡಿದ್ದೆ, ನನಗೆ ಹೊಲಿಗೆ ಯಂತ್ರ ಕಳಿಸಿದ್ದರು ಎಂದಿದ್ದಾರೆ ಒಬ್ಬರು. ಆದ್ದರಿಂದ ಡೆಲಿವರಿ ಏಜೆಂಟರ್ ಮುಂದೆಯೇ ಬಾಕ್ಸ್ ತೆರೆದು ನಂತರ ಅದನ್ನು ತೆಗೆದುಕೊಳ್ಳಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.