ನ್ಯೂಸ್ ನಾಟೌಟ್: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಚಾಲನೆ ನೀಡಿದ 5 ರೂ. ನಾಣ್ಯದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡ ಮರುದಿನವೇ ಮುಚ್ಚಿರುವುದು ವರದಿಯಾಗಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು ₹5.50 ಲಕ್ಷ ವೆಚ್ಚದಲ್ಲಿ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು. ಶನಿವಾರ ಉದ್ಘಾಟನೆಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗೆ ಲಭ್ಯವಿಲ್ಲದೇ ಭಾನುವಾರ ಮುಚ್ಚಲ್ಲಟ್ಟಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜಿ.ಯಂ.ಪಿ ಶಾಲಾ ಮೈದಾನದ ಬಳಿ ₹5ರ ನಾಣ್ಯ ಬಳಸಿ ಶುದ್ಧ ಕುಡಿಯುವ ನೀರನ್ನು ಬಳಸುವ ಘಟಕಕ್ಕೆ ಶನಿವಾರ ಸಂಜೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಚಾಲನೆ ನೀಡಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕರು ನೀರು ತುಂಬಿಸಲು ಕ್ಯಾನ್ ಸಹಿತ ಘಟಕದ ಬಳಿ ಬಂದಾಗ ಘಟಕ ಮುಚ್ಚಿರುವುದನ್ನು ಗಮನಿಸಿ ನಾಮಾಕಾವಸ್ಥೆ ಮತ್ತು ತರಾತುರಿಯಲ್ಲಿ ಘಟಕ ಉದ್ಘಾಟಿಸುವ ಅವಶ್ಯಕತೆ ಇತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಘಟಕದ ಉದ್ಘಾಟನೆಗಾಗಿ ಮಾತ್ರ ತಾತ್ಕಾಲಿಕ ವಿದ್ಯುತ್ ಬಳಸಿ ಚಾಲನೆ ನೀಡಲಾಗಿತ್ತು. ಆದರೆ, ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಈ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರೂ ತಿಳಿಸಿದರು.