ನ್ಯೂಸ್ ನಾಟೌಟ್: ಊರಿಗೊಂದು ಸ್ಮಶಾನ ಇರಲೇಬೇಕು ಅನ್ನುವ ನಿಯಮವಿದೆ. ಆದರೆ ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಹೆಣ ಇಡೋಕು ಜಾಗದ ವ್ಯವಸ್ಥೆ ಇಲ್ಲ. ಹೀಗೆ ಸ್ಮಶಾವಿಲ್ಲದ ಗ್ರಾಮಸ್ಥರು ಶವವನ್ನು ಗ್ರಾಮ ಪಂಚಾಯತ್ ಮುಂದೆಯೇ ಇಟ್ಟು ಪ್ರತಿಭಟಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೆರಿಯಾ ಗ್ರಾಮದಲ್ಲಿ ರುದ್ರ ಭೂಮಿಯ ವ್ಯವಸ್ಥೆ ಇಲ್ಲ. ಸ್ಮಶಾನಕ್ಕಾಗಿ ಹಲವು ಬಾರಿ ಮನವಿ ಮಾಡಿದ್ದರೂ ಏನೂ ಪ್ರಯೋಜನ ಆಗಿರಲಿಲ್ಲ. ಹೀಗಿರುವಾಗ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿರಲಿಲ್ಲ. ನೆರಿಯಾದ ಜನತಾ ಕಾಲೋನಿಯ ಜನರು ಶವ ಸಂಸ್ಕಾರಕ್ಕೆ ಬೇರೆ ದಾರಿ ಕಾಣದೆ ನೇರವಾಗಿ ಶವವನ್ನು ತೆಗೆದುಕೊಂಡು ನೆರಿಯಾ ಗ್ರಾಮ ಪಂಚಾಯತ್ ಗೆ ಬಂದಿದ್ದಾರೆ. ಅಂತ್ಯಕ್ರಿಯೆ ನಡೆಸದೆ ಶವವಿರಿಸಿ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದ್ದಾರೆ.
ಸ್ಮಶಾನಕ್ಕೆ ಸ್ಥಳ ನಿಗದಿ ಮಾಡದೆ ಹೋದರೆ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜನರ ಆಕ್ರೋಶ ಹಿನ್ನಲೆ ಪರಿಸ್ಥಿತಿ ಕೈ ಮೀರುವ ಮುನ್ನ ಸ್ಥಳಕ್ಕೆ ತಹಶೀಲ್ದಾರ್ ಓಡೋಡಿ ಬಂದಿದ್ದಾರೆ. ತಕ್ಷಣ ತಹಶೀಲ್ದಾರ್ ನೇತೃತ್ವದಲ್ಲಿ ಇಟ್ಟಾಡಿ ಎಂಬಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಸ್ಥಳದ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಸಂದರ್ಭ ನಿಗದಿತ ಸ್ಥಳದಲ್ಲಿ ಸ್ಮಶಾನ ಮಾಡಲು ಬಿಡುವುದಿಲ್ಲ ಸ್ಥಳೀಯರು ಪಟ್ಟು ಹಿಡಿದರು. ಈ ನಡುವೆ ಗೊಂದಲದಿಂದಾಗಿ ಪಂಚಾಯತ್ ಮುಂದೆ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಗ್ರಾಮಸ್ಥರ ಆಕ್ರೋಶ ತೀವ್ರಗೊಂಡ ಹಿನ್ನಲೆ ತುರ್ತು ನಿರ್ಧಾರ ಕೈ ಗೊಂಡ ತಹಶೀಲ್ದಾರ್ ಪಂಚಾಯತ್ ಸಮೀಪದ ಸರಕಾರಿ ಜಾಗವನ್ನ ಸ್ಮಶಾನಕ್ಕಾಗಿ ನಿಗದಿ ಪಡಿಸಲು ಆದೇಶ ಹೊರಡಿಸಿದರು. ಸ್ಮಶಾನಕ್ಕೆ ಸ್ಥಳ ನಿಗದಿಯಾದ ಹಿನ್ನಲೆ ಪ್ರತಿಭಟನೆ ಹಿಂಪಡೆಯಲಾಯಿತು. ನಿಗದಿತ ಸ್ಥಳದಲ್ಲೇ ಅಂತ್ಯಸಂಸ್ಕಾರಕ್ಕೆ ಮೃತರ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡರು.