ನ್ಯೂಸ್ ನಾಟೌಟ್ : ಟೋಮೆಟೋ ಬೆಲೆ 80ರೂ. ಆಯ್ತಂತೆ,ಇವತ್ತು 100 ರೂ. ಆಯ್ತಂತೆ. ಇಲ್ಲ ಇಂದಿನ ಬೆಲೆ 120ಕ್ಕೆ ಏರಿದೆಯಂತೆ ಹೀಗೆ ಅಂತೆ ಕಂತೆ ಎಂದು ಮಾತನಾಡುತ್ತಿರುವಾಗಲೇ ಟೋಮೆಟೋ ಬೆಲೆ 300ರೂ.ವರೆಗೆ ಏರುವ ಸಾಧ್ಯತೆ ಇದೆ ಎನ್ನುವ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಸಾರ್ವಕಾಲಿಕ ದಾಖಲೆ ಮಟ್ಟದ ಬೆಲೆ ಕಂಡಿರುವ ಟೊಮ್ಯಾಟೊ ಧಾರಣಿ ಇನ್ನಷ್ಟು ಏರುವುದು ಖಚಿತ ಎಂದು ಕೃಷಿ ತಜ್ಞರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಸರಕು ನಿರ್ವಹಣಾ ಸೇವಾ ಸಂಸ್ಥೆ (ಎನ್ಸಿಎಂಎಲ್) ಸಿಇಒ ಸಂಜಯ್ ಗುಪ್ತಾ ಟೊಮ್ಯಾಟೊ ಬೆಲೆಯೇರಿಕೆ ಸಮಸ್ಯೆ ಇನ್ನೂ ಸ್ವಲ್ಪ ಸಮಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ವಿಪರೀತ ಮಳೆ ಹಿನ್ನಲೆ ಟೊಮ್ಯಾಟೋ ಸಸಿ ನಾಟಿ ಕಷ್ಟ ಸಾಧ್ಯ.ಹೀಗಾಗಿ ಬೆಲೆ ಸ್ಥಿರಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದೆಂದು ಅವರು ಹೇಳಿದ್ದಾರೆ. ಜೂನ್ ಆರಂಭದಲ್ಲಿ ಕೆಜಿಗೆ ೨೦ ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಜುಲೈ ಮೊದಲ ವಾರದ ಹೊತ್ತಿಗೆ ಕೆಜಿಗೆ 100 ರೂ. ದಾಟಿತ್ತು. ಇದೀಗ ಕೆ.ಜಿ.ಗೆ ಸರಾಸರಿ 200 ರೂಪಾಯಿಯವರೆಗೂ ಏರಿದೆ.
ಅತ್ತ ಬೆಲೆ ಏರಿಕೆಯಾಗಿದೆ ಎಂದು ರೈತರು ಖುಷಿ ಪಟ್ರೆ, ಇತ್ತ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ. ರೈತ ಟೋಮೆಟೋ ಕೃಷಿಯಲ್ಲಿ ಲಾಭ ಮಾಡುವುದೇ ಕಷ್ಟ. ಆದರೆ ಟೊಮ್ಯಾಟೊ ಬೆಲೆ ಏರಿಕೆಯಿಂದ ಒಂದಷ್ಟು ಹಣ ಕಂಡ ರೈತ ಇದೇ ಕಾರಣಕ್ಕೆ ಪ್ರಾಣ ಕಳೆದುಕೊಳ್ಳಬೇಕಾದ ಘಟನೆ ಕೂಡ ನಡೆದಿತ್ತು.ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಮದನಪಲ್ಲಿಯ ನರೇಂ ರಾಜಶೇಖರ ರೆಡ್ಡಿ (62) ಎಂಬ ರೈತನನ್ನು ದುಷ್ಕರ್ವಿುಗಳು ಅಪಹರಿಸಿ ಹತ್ಯೆ ಮಾಡಿದ್ದರು. ಮತ್ತೊಂದೆಡೆ 2 ಲಕ್ಷ ರೂ. ಮೌಲ್ಯದ ಟೋಮೆಟೋವನ್ನು ತೋಟದಿಂದಲೇ ಕಳ್ಳರು ಕದ್ದೊಯ್ದ ಘಟನೆ ಹಾಸನದಿಂದ ವರದಿಯಾಗಿತ್ತು. ಮೊದಲೇ ಕಳ್ಳರ ಹಾವಳಿ ತಡೆಯಲಾಗದೇ ಇದ್ದ ಜನ ಈಗ ಟೋಮೆಟೊ ಬೆಲೆ ಹೆಚ್ಚಳದಿಂದಾಗಿ ಟೊಮೆಟೋ ಕಾಯುವ ಪರಿಸ್ಥಿತಿ ಬಂದೊದಗಿದೆ.