ನ್ಯೂಸ್ ನಾಟೌಟ್: ಯಾವುದೇ ಕ್ಷೇತ್ರದಲ್ಲಿ ಉದ್ಯೋಗಿಗಳು ಶ್ರದ್ಧೆಯಿಟ್ಟು ಕೆಲಸ ನಿರ್ವಹಿಸಿದರೆ ನಿವೃತ್ತಿಯ ಬಳಿಕವೂ ಜನರು ಗೌರವದಿಂದ ಗುರುತಿಸುತ್ತಾರೆ ಎಂದು ಬಣಕಲ್ ಅಂಚೆ ಕಚೇರಿಯ ಪಾಲಕ ಮಹೇಂದ್ರ ಮೌರ್ಯ ಹೇಳಿದರು.
ಕೊಟ್ಟಿಗೆಹಾರ ಅಂಚೆ ಕಚೇರಿಯಲ್ಲಿ ಶುಕ್ರವಾರ ನಿವೃತ್ತಿ ಹೊಂದಿದ ಅಂಚೆ ಕಚೇರಿ ಸೇವಕ ಪಿ.ಕೆ.ದಿವಾಕರ್ ಕಾರಂತ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕೊಟ್ಟಿಗೆಹಾರ ಅತೀ ಹೆಚ್ಚು ಮಳೆ ಬೀಳುವ ಗ್ರಾಮೀಣ ಪ್ರದೇಶವಾಗಿದ್ದು, ತೀವ್ರ ಮಳೆಯನ್ನೂ ಲೆಕ್ಕಿಸದೆ ದಿವಾಕರ್ ಅವರು 41 ವರ್ಷಗಳ ಕಾಲ ಪ್ರಾಮಾಣಿಕವಾಗಿ ಅಂಚೆ ಇಲಾಖೆಯಲ್ಲಿ ಸೇವೆ ನೀಡಿದ್ದಾರೆ. ಇವರ ಸೇವೆ ಜನರ ಪ್ರೀತಿಗೆ ಪಾತ್ರವಾಗಿದೆ. ಕೆಲಸದಲ್ಲಿ ಕಪ್ಪು ಚುಕ್ಕೆ ಬಾರದಂತೆ ನಿರ್ವಹಿಸಿದ್ದಾರೆ. ಇವರ ನಿವೃತ್ತಿಯ ಜೀವನ ಸುಖಮಯವಾಗಲಿ ಎಂದರು.
ನಿವೃತ್ತ ಉದ್ಯೋಗಿ ತರುವೆ ಗ್ರಾಮದ ಪಿ.ಕೆ.ದಿವಾಕರ್ ಕಾರಂತ್ ಅವರನ್ನು ಹಿರಿಯ ಅಂಚೆ ಕಚೇರಿ ಪಾಲಕರು ಹಾಗೂ ಸಹೋದ್ಯೋಗಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಐಡಿಜಿಎಸ್ ಯುವ ಕಾರ್ಯದರ್ಶಿ ಹನುಮಂತಪ್ಪ, ಸಿಬ್ಬಂದಿಯಾದ ರವಿ ಕುಮಾರ್, ಕೃಷ್ಣ, ರವೀಂದ್ರ, ಮಂಜುನಾಥ್, ಸುರೇಶ್, ಭರತ್, ಪರ್ವತಪ್ಪ, ನಿಶಾಂತ್ ಬಣಕಲ್, ಶಶಿಕುಮಾರ್ ಉಪಸ್ಥಿತರಿದ್ದರು.