ನ್ಯೂಸ್ ನಾಟೌಟ್ : ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿದ್ದ ಟೈಟಾನ್ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ನಾಪತ್ತೆಯಾಗಿರುವುದರ ಆತಂಕಕಾರಿ ಘಟನೆಯೊಂದು ಭಾರಿ ಸುದ್ದಿಯಾಗಿತ್ತು. ಜಲಾಂತರ್ಗಾಮಿ ನೌಕೆ ಅಂತರ್ಸ್ಫೋಟಗೊಂಡು ಐವರು ಪ್ರಮುಖ ವ್ಯಕ್ತಿಗಳು ಮೃತಪಟ್ಟ ದಾರುಣ ಘಟನೆ ನಡೆದಿತ್ತು. ಆದರೆ ಅದು ಹೇಗೆ ಸ್ಪೋಟಕ್ಕೆ ಕಾರಣವಾಯಿತು? ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿದ್ರೂ ಕೂಡ ಈ ರೀತಿಯ ದುರಂತ ಸಂಭವಿದ್ಯಾಕೆ ಎನ್ನುವ ನೂರಾರು ಪ್ರಶ್ನೆಗಳು ಎದ್ದಿದ್ದವು.
ಭೀಕರ ಘಟನೆಗೆ ಕಾರಣ ಮತ್ತು ಫಲಿತಾಂಶವನ್ನು ಸಾಗರ ವಿಜ್ಞಾನಿಗಳು ಮತ್ತು ಕಡಲ ವ್ಯವಹಾರಿಕ ಸಂಸ್ಥೆಗಳು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ. ಇಇದೀಗ ಸಾಮಾಜಿಕ ಜಾಲತಾಣದಲ್ಲಿ ಟೈಟಾನ್ ನೌಕೆಯ ದುರಂತ ಹೇಗೆ ಸಂಭವಿಸಿತು ಎಂದು ವಿವರಿಸುವ ವಿಡಿಯೋ ತುಣುಕೊಂದು ಭಾರಿ ವೈರಲ್ ಆಗಿದ್ದು,ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ.
6 ನಿಮಿಷ 20 ಸೆಕೆಂಡ್ವುಳ್ಳ ಅನಿಮೇಷನ್ ವಿಡಿಯೋವನ್ನು ಜೂನ್ 30ರಂದು AiTelly ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕೇವಲ 13 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ ಅಂದ್ರೆ ಅಚ್ಚರಿಯ ವಿಚಾರ.
ಜೂನ್ 18ರಂದು ಐವರು ಪ್ರಯಾಣಿಕರು ತಲಾ ಎರಡುವರೆ ಲಕ್ಷ ಡಾಲರ್ ನೀಡಿ ಈ ಭಯಾನಕ ಪ್ರವಾಸ ಕೈಗೊಂಡಿದ್ದರು.ಇನ್ನೇನು ಟೈಟಾನಿಕ್ ಅವಶೇಷಗಳಿರುವ ಕಡೆ ತೆರಳುತ್ತಿದ್ದೇವೆ ಎನ್ನುವ ಖುಷಿಯಲ್ಲಿದ್ದ ಐವರು ಟೈಟಾನ್ ಜಲಾಂತರ್ಗಾಮಿ ನೌಕೆ ಮುಳುಗಲು ಆರಂಭಿಸಿದ ಎರಡು ಗಂಟೆಗಳಲ್ಲಿ ರಾಡರ್ನಿಂದ ನಾಪತ್ತೆಯಾಗಿದ್ದರಿಂದ ಕಣ್ಮರೆಯಾದರು. ಇದಾದ ಬಳಿಕ ನಾಲ್ಕು ದಿನಗಳ ಕಾಲ ತೀವ್ರ ಶೋಧ ನಡೆಯಿತು. ಆದರೆ, ಟೈಟಾನ್ ನೌಕೆ ಅಂತರ್ಸ್ಫೋಟಗೊಂಡು ಅದರಲ್ಲಿದ್ದ ಐವರು ಮೃತಪಟ್ಟಿದ್ದಾರೆ ಎಂದು ಯುಎಸ್ ಕರಾವಳಿ ಪಡೆ ತಿಳಿಸಿತು.
ಟೈಟಾನ್ ನೌಕೆ ಸ್ವತಃ ಕುಸಿಯುವ ಮೂಲಕ ಹೇಗೆ ವಿನಾಶವಾಯಿತು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.ಆ್ಯನಿಮೇಶನ್ನಲ್ಲಿ ತೋರಿಸಿರುವಂತೆ ಈ ದುರಂತ ಮಿಲಿಸೆಕೆಂಡ್ನ ಒಂದು ಭಾಗದೊಳಗೆ ಸಂಭವಿಸಿದೆ ಎಂದು ಹೇಳಲಾಗಿದೆ.
ಟೈಟಾನ್ ಜಲಂತರ್ಗಾಮಿ ಬಗ್ಗೆ ಕುತೂಹಲಕಾರಿ ಅಂಶಗಳನ್ನು ತಿಳಿದು ಕೊಳ್ಳಬೇಕೆಂದು ಕಾತುರ ಪಡುವ ಅನೇಕ ಮಂದಿ ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.ಮನಸ್ಸಿನಲ್ಲಿದ್ದ ಕೆಲ ಗೊಂದಲಗಳಿಗೆ ಈ ವಿಡಿಯೋ ಮೂಲಕ ಉತ್ತರ ಸಿಕ್ಕಿದೆ ಎಂದಿದ್ದಾರೆ. ಸಮುದ್ರದಂತರಾಳದಲ್ಲಿ ನಡೆದ ಟೈಟಾನ್ ದುರಂತ ಹೇಗೆ ಸಂಭವಿಸಿತು ಎಂಬುದಕ್ಕೆ ಈ ವಿಡಿಯೋ ನೋಡಿದ್ರೆ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.