ನ್ಯೂಸ್ ನಾಟೌಟ್ : ಭಾರತದ ಬಹುನಿರೀಕ್ಷಿತ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯ (ISRO) ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಉಡಾವಣೆಗೊಂಡಿದೆ.ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ.
ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್ 3 ‘ಬಾಹುಬಲಿ ರಾಕೆಟ್’ ನಭಕ್ಕೆ ಚಿಮ್ಮಿದೆ. ಚಂದ್ರಯಾನ ನೌಕೆಯು ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರುವಲ್ಲಿಯೂ ಯಶಸ್ವಿಯಾಗಿದೆ.
ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಅಧಿಕೃತ ಚಾಲನೆ ಸಿಕ್ಕಿದ್ದು,ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು,ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ ಎಂಬ ಮಾಹಿತಿಯಿದೆ.
ಈ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲದೇ ಈ ಬಾರಿ ಮುಂಬೈನ ಪೊವಾಯಿ ಮತ್ತು ಕೊಯಮತ್ತೂರಿನಲ್ಲಿರುವ ಲಾರ್ಸೆನ್ ಮತ್ತು ಟೂಬ್ರೊ ಕಾರ್ಖಾನೆಯ ಕೆಲಸಗಾರರೂ ಸಾಥ್ ನೀಡಿದ್ದಾರೆ.
ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಈ ಸಾಧನೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳಲು ಭಾರತದ ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಚಂದ್ರಯಾನ 3 ಯಶಸ್ವಿ ಉಡಾವಣೆ ಹಿನ್ನೆಲೆ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಪ್ರತಿಕ್ರಿಯೆ ನೀಡಿದ್ದು, ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.