ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ತಡರಾತ್ರಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ಕನ್ನ ಹಾಕಿದ ಖದೀಮರು ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರು ಸಹಿತ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಮಂಗಳೂರು ತಾಲೂಕಿನ ಹೊಸಬೆಟ್ಟು ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದೆ.ಅಬಿದ್ ಅಹಮ್ಮದ್ ಸುರಲ್ಪಾಡಿ ಎಂಬವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಚೇರಿ ಇದಾಗಿದ್ದು,ತಡರಾತ್ರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದ ಖದೀಮರ ತಂಡವೊಂದು ಕಚೇರಿ ಮುಂಭಾಗದ ಡೋರಿನ ಗ್ಲಾಸ್ ಮುರಿದು ಒಳ ಪ್ರವೇಶಿಸಿದ್ದಾರೆ.
ಕಚೇರಿ ಪೂರ್ತಿ ಹುಡುಕಾಡಿ ಡ್ರಾವರ್ ನಲ್ಲಿದ್ದ ಕಾರುಗಳ ಕೀಯನ್ನು ಪಡೆದು ಕಚೇರಿ ಮುಂಭಾಗ ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರುಗಳನ್ನು ಲಪಟಾಯಿಸಿದ್ದಾರೆ.6 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ 9 ಲಕ್ಷ ಮೌಲ್ಯದ ಕ್ರೇಟಾ ಕಾರು ಸಮೇತ ಕಚೇರಿಯ ಒಳಗಿದ್ದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲಾತಿ ಪತ್ರಗಳನ್ನು ಕೂಡ ಖದೀಮರು ಕಳವುಗೈದಿದ್ದಾರೆ.
ಒಟ್ಟು 15 ಲಕ್ಷ ಮೌಲ್ಯದ ಸೊತ್ತುಗಳ ಕಳ್ಳತನವಾಗಿದೆಯೆಂದು ಅಂದಾಜಿಸಲಾಗಿದೆ.ಕಳ್ಳರ ಕರಾಮತ್ತಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,
ಹೆಲ್ಮೆಟ್ ಹಾಗೂ ರೈನ್ ಜಾಕೆಟ್ ನೊಂದಿಗೆ ಕಳ್ಳರು ಎಂಟ್ರಿಯಾಗಿದ್ದಾರೆನ್ನುವ ಸುಳಿವು ಸಿಕ್ಕಿದೆ.ಗ್ಲಾಸ್ ಒಡೆಯುವ ದೃಶ್ಯ, ಕಾರು ಎಸ್ಕೇಪ್ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಖದೀಮರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.