ನ್ಯೂಸ್ ನಾಟೌಟ್ :ವಿಧವೆಯರು,ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಆನ್ಲೈನ್ನಲ್ಲಿ ಗಾಳ ಹಾಕಿ ಮದುವೆಯಾಗುತ್ತಿದ್ದ ಅಸಾಮಿಯ ಕರ್ಮಕಾಂಡ ಮತ್ತಷ್ಟು ಬಯಲಾಗಿದೆ.ಈತ ಮಹಿಳೆಯರನ್ನು ಮಾದುವೆಯಾಗಿದ್ದು ಅಲ್ಲದೇ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ .ಈ ಖತರ್ನಾಕ್ ಆಸಾಮಿಯನ್ನು ಇತ್ತೀಚೆಗಷ್ಟೇ ಮೈಸೂರು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿವೆ.
ಮಹೇಶ್ (35) ಬಂಧಿತ ಆರೋಪಿಯಾಗಿದ್ದು, ಮೂಲತಃ ಈತ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿಯಾಗಿದ್ದಾನೆ.ಈತ ಮಹಿಳೆಯರನ್ನು ಮದುವೆಯಾಗಿ, ಮಕ್ಕಳು ಮಾಡಿ, ನಗ- ನಾಣ್ಯ ದೋಚಿ ನಾಪತ್ತೆಯಾಗುತ್ತಿದ್ದ. ಬರೋಬ್ಬರಿ 12 ಮದುವೆಯಾದರೂ ಈತನ ಬಗ್ಗೆ ಯಾರೊಬ್ಬ ಮಹಿಳೆ ಕೂಡ ದೂರು ಕೊಡಲು ಮುಂದೆ ಬಂದಿರಲಿಲ್ಲ.ಕೊನೆಗೂ ಮೈಸೂರಿನ ಓರ್ವ ಸಂತ್ರಸ್ತ ಮಹಿಳೆ ಮುಂದೆ ಬಂದು ದೂರು ನೀಡಿದ ಬಳಿಕ ಮಹೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಕುವೆಂಪುನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಹಾವಂಚಕನನ್ನು ಕಾನೂನಿನ ಬಲೆಗೆ ಬೀಳಿಸಿದ್ದಾರೆ.
ಈತ ಸಿರಿವಂತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಆನ್ಲೈನ್ನಲ್ಲಿ ಗಾಳ ಹಾಕುತ್ತಿದ್ದ.ತನ್ನ ಮರಳು ಮಾತುಗಳಿಂದಲೇ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಗ್ರಹಿಸುತ್ತಿದ್ದ. ಬಳಿಕ ಮದುವೆಯಾಗುವ ನಾಟಕವಾಡಿ ವಂಚನೆ ಮಾಡುತ್ತಿದ್ದ.ವಿಚಾರಣೆ ವೇಳೆ ಒಟ್ಟು 12 ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದು, ಈ ಪೈಕಿ 6 ಮಹಿಳೆಯರಿಗೆ ಮಕ್ಕಳಿದ್ದಾರೆ.ಅವರನ್ನೆಲ್ಲಾ ಮದುವೆ ಆಗಲು ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮಾದರಿಯನ್ನು ಅನುಸರಿಸುತ್ತಿದ್ದ. ಅಂದರೆ ಆತ 5 ಸಾವಿರ ರೂಪಾಯಿ ಕೊಟ್ಟರೆ ಸಾಕು ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗ ಎಲ್ಲರೂ ಬಂದು ಸೇರುತ್ತಿದ್ದರು. ಈ ಪ್ರಳಯಾಂತಕ ಒಂದೊಂದು ಮದುವೆಗೂ ಒಂದೊಂದು ಬಳಗವನ್ನು ಫಿಕ್ಸ್ ಮಾಡಿ ವಂಚನೆ ಮಾಡುತ್ತಿದ್ದ.
ಆರೋಪಿ ಮಹೇಶ್ಗೆ ಶಾದಿ ಡಾಟ್ ಕಾಂನಲ್ಲಿ ಮೈಸೂರಿನ ನಿವಾಸಿಯೊಬ್ಬರು ಪರಿಚಯವಾಗಿದ್ದರು. ತಾನೊಬ್ಬ ಡಾಕ್ಟರ್ ಎಂದು ನಂಬಿಸಿ ಆಕೆಯನ್ನು ವರಿಸಿದ್ದಾನೆ. ಇದಾದ ಬಳಿಕ ತಾನೊಂದು ಕ್ಲಿನಿಕ್ ತೆರೆಯಬೇಕೆಂದು ಅಂದುಕೊಂಡಿದ್ದೇನೆ. ಇದಕ್ಕಾಗಿ 70 ಲಕ್ಷ ರೂ. ಬೇಕಿತ್ತು,ಯಾರಲ್ಲಾದರೂ ಸಾಲ ಕೊಡಿಸು ಎಂದು ಒತ್ತಾಯ ಮಾಡಲು ಶುರು ಮಾಡಿದ್ದ. ಆದರೆ, ಸಂಶಯಗೊಂಡ ಮಹಿಳೆ ಸಾಲ ಕೊಡಿಸಲು ಹಿಂದೇಟು ಹಾಕಿದ್ದಾರೆ. ಕೊನೆಗೆ ನನಗೆ ಸಾಲ ಕೊಡಿಸಿಲ್ಲ ಅಂದ್ರೆ ನಿನ್ನ ಕೊಲೆ ಮಾಡುವುದಾಗಿ ಬೆದರಿಯೊಡ್ಡಿದ್ದಾನೆ.ಮಾತ್ರವಲ್ಲ ಆಕೆಯ 15 ಲಕ್ಷ ರೂ. ಹಣ ಹಾಗೂ ಚಿನ್ನಾಭರಣ ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ.ಇದರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ಆ ಮಹಿಳೆ ದೂರು ನೀಡಿದ್ದಾಳೆ.ಈ ಬಗ್ಗೆ ತನಿಖೆ ಕೈಗೆತ್ತಗೊಂಡ ಪೊಲೀಸರು ಆತನ ಒಂದೊಂದೇ ಆಘಾತಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.
ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಹೀಗೆ ಹಲವು ಪ್ರತಿಷ್ಠಿತ ಸ್ಥಾನಗಳ ಹೆಸರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.ಸದ್ಯ ಆರೋಪಿ ಮಹೇಶ್ನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.