ನ್ಯೂಸ್ ನಾಟೌಟ್ : ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿರುವ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ನಿಷೇಧಿತ ಇಸ್ಲಾಮಿಕ್ ಸಂಘಟನೆಯಾದ ಪಿಎಫ್ಐ ಕಾರ್ಯಕರ್ತರು ಕತ್ತರಿಸಿದ್ದರು. ಜುಲೈ 4, 2010ರಂದು ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿರುವ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕುಟುಂಬದೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಜೋಸೆಫ್ ಮೇಲೆ ದಾಳಿ ನಡೆಸಲಾಗಿತ್ತು.ತೊಡುಪುಳ ನ್ಯೂಮನ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಪ್ರೊಫೆಸರ್ ಅವರ ಕೈಯನ್ನೇ ಕತ್ತರಿಸಿದ್ದರು. ಇದೀಗ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
2010ರಲ್ಲಿ ನಡೆದ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸದಸ್ಯರಾಗಿರುವ ಆರು ಮಂದಿಯನ್ನು ‘ದೋಷಿಗಳು’ ಎಂದು ಕೇರಳದ ವಿಶೇಷ ಎನ್ಐಎ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ.
ತೊಡುಪುಳ ನ್ಯೂಮನ್ ಕಾಲೇಜಿನ ಶಿಕ್ಷಕರಾಗಿದ್ದ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ವಿಚಾರಣೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊ* ಲೆ ಯತ್ನ, ಪಿತೂರಿ ಮತ್ತು ಇತರೆ ವಿವಿಧ ಅಪರಾಧಗಳಡಿ ವಿಚಾರಣೆಗೆ ಒಳಗಾದ ಹನ್ನೊಂದು ಆರೋಪಿಗಳ ಪೈಕಿ ಆರು ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸಜಲ್, ನಾಸರ್, ನಜೀಬ್, ನೌಶಾದ್, ಮೊಯ್ತೀನ್ ಕುಂಜ್ ಮತ್ತು ಅಯೂಬ್ ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದ್ದು, ಶಫೀಕ್, ಅಜೀಜ್, ಜುಬೇರ್, ಮಹಮ್ಮದ್ ರಫಿ ಮತ್ತು ಮನ್ಸೂರ್ ಖುಲಾಸೆಯಾಗಿದ್ದಾರೆ.
ಮೊದಲ ಹಂತದಲ್ಲಿ 31 ಆರೋಪಿಗಳು ವಿಚಾರಣೆ ಎದುರಿಸಿದ್ದರು. ಒಟ್ಟು13 ಜನರನ್ನು ತಪ್ಪಿತಸ್ಥರೆಂದು ಗುರುತಿಸಿ ಶಿಕ್ಷೆ ವಿಧಿಸಿದ್ದು, 18 ಮಂದಿ ದೋಷಮುಕ್ತರಾಗಿದ್ದರು ಎಂದು ಕೋರ್ಟ್ ಆದೇಶ ಪ್ರಕಟಿಸಿದೆ.